ಹಾವೇರಿ:- ಇನ್ಯೂರೆನ್ಸ್ ಹಣ & ಆಸ್ತಿಗಾಗಿ ಸ್ನೇಹಿತನನ್ನೇ ಕೊಲೆಗೈದು ಬಳಿಕ ಅಪಘಾತವೆಂದು ಬಿಂಬಿಸಿದ್ದ ನಾಲ್ವರು ಹಂತಕರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ರಟ್ಟಿಹಳ್ಳಿ ನಿವಾಸಿ ಬಸವರಾಜ್ ಪುಟ್ಟನವರ (40) ಕೊಲೆಯಾದ ವ್ಯಕ್ತಿ. ರಾಘು, ಸಿದ್ದನಗೌಡ, ಪ್ರವೀಣ,ಲೋಕೇಶ್ ಬಂಧಿತ ಆರೋಪಿಗಳು.
ರಟ್ಟಿಹಳ್ಳಿಯ ಚಿಕ್ಕಯಡಚಿ ರಸ್ತೆಯಲ್ಲಿರುವ ಬಣಕಾರ ಮನೆ ಬಳಿ ಈ ಕೊಲೆ ನಡೆದಿತ್ತು. ಆರೋಪಿಗಳು, ಇನ್ಯೂರೆನ್ಸ್ ಹಣ & ಆಸ್ತಿ ದೋಚಲು ಸಿನಿಮೀಯ ಸ್ಟೈಲ್ ನಲ್ಲಿ ಪ್ಲ್ಯಾನ್ ಮಾಡಿದ್ದರು. ಅದರ ಭಾಗವಾಗಿ 3 ತಿಂಗಳ ಹಿಂದೆಯೇ ಅಂಚೆಯಲ್ಲಿ 500 ರೂ ಅಪಘಾತ ವಿಮೆ ಮಾಡಿಸಿದ್ದರು. ಅಷ್ಟೇ ಅಲ್ಲದೆ ಸಂಪೂರ್ಣ ಆಸ್ತಿಯನ್ನ ತಮ್ಮ ಹೆಸರಿಗೆ ವಿಲ್ ನಲ್ಲಿ ನೊಂದಣಿ ಮಾಡಿಸಿಕೊಂಡಿದ್ದರು.
ಒಂಟಿಯಾಗಿದ್ದ ವ್ಯಕ್ತಿಯ ಹಣ & ಆಸ್ತಿ ದೋಚಲು ಸ್ನೇಹಿತರೇ ಈ ಪ್ಲ್ಯಾನ್ ಮಾಡಿದ್ದರು. ಅದರಂತೆ ದಿ.27 ರಂದು ರಾತ್ರಿ ಹೊತ್ತು ಬಸವರಾಜ್ ಗೆ ಎಣ್ಣೆ ಕುಡಿಸಿ ಕಾರಿನಿಂದ ಗುದ್ದಿ ಅಪಘಾತವಾದ ರೀತಿಯಲ್ಲಿ ಕೊಲೆಗೈದಿದ್ದರು. ಬಳಿಕ ಮೃತದೇಹ ಬಿಸಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದರು.
ಘಟನೆ ಸಂಬಂಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಇನ್ಶುರೆನ್ಸ್ ಹಣಕ್ಕೆ ಮಾಡಿಸಿದ್ದ ನಾಮಿನಿ ಸಹಿ ಮೂಲಕ ಸತ್ಯ ಬಯಲಾಗಿದೆ. ಕೂಡಲೇ ನಾಲ್ವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಆಗ ಆರೋಪಿಗಳು ಸತ್ಯ ಒಪ್ಪಿಕೊಂಡಿದ್ದಾರೆ.
ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.