ಬೆಂಗಳೂರು: ರಾಜ್ಯ ಸರಕಾರವು ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿ ಗಣತಿ ವಿಷಯದಲ್ಲಿ ತೀರ್ಮಾನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ಜಾತಿ ಗಣತಿ ವಿಚಾರದಲ್ಲಿ ಗಣತಿದಾರ ಶಿಕ್ಷಕವೃಂದಕ್ಕೂ ಸಮಸ್ಯೆ ಆಗುತ್ತಿದೆ. ರಜೆ ದಿನಗಳನ್ನೂ ವಿಸ್ತರಿಸಿದ್ದರಿಂದ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಸಮಸ್ಯೆ ಆಗಲಿದೆ. ಸರಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳಿಗೆ ಒಂದೊಂದು ದಿನವೂ ಅಷ್ಟೇ ಮಹತ್ವದ್ದು ಎಂದು ನುಡಿದರು. ಶಾಲೆಗೆ ರಜೆ ಘೋಷಿಸಿ ಶಾಲಾ ಮಕ್ಕಳಿಗೂ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ಕರೆದಿದ್ದು, ಶಾಸಕರಿಗೆ ಸಭೆಯ ಕಾರ್ಯಸೂಚಿಯನ್ನೇ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜಿಬಿಎ ಅಜೆಂಡವನ್ನೂ ಕೊಡದೆ ಗೌಪ್ಯವಾಗಿ ಸಭೆ ಮಾಡುತ್ತಿದ್ದಾರೆ. ಡಿಸೆಂಬರ್ನಲ್ಲಿ ಚುನಾವಣೆ ನಡೆಸುವುದಾಗಿ ಹೇಳುತ್ತಾರೆ. ಎಲ್ಲಿದೆ ತಯಾರಿ? ಎಂದು ಪ್ರಶ್ನಿಸಿದರು. ಎಷ್ಟು ಅಧಿಕಾರಿಗಳು ಬೇಕು? ಮೂಲಭೂತ ಸೌಕರ್ಯಗಳು, ಯಾವುದೂ ಇಲ್ಲದೇ ರಾಜಕೀಯ ಚಟಕ್ಕೆ ಘೋಷಣೆ ಮಾಡುತ್ತಾರೆ. ಯಾವುದೇ ಯೋಜನೆ ಇಲ್ಲದೇ ಹೊರಟಿದ್ದಾರೆ ಎಂದರು.
ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ..
ಬೆಂಗಳೂರಿನ ಜನತೆ ಈ ಸರಕಾರಕ್ಕೆ ಛೀ ಥೂ ಎಂದು ಉಗುಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿಯವರ ಮನೆ ಮುಂದೆ ಗುಂಡಿ ಇದೆ; ಅಲ್ಲಿ ಗುಂಡಿ ಇದೆ ಎಂದು ಲೆಕ್ಕ ಹಾಕಲು ಹೊರಟಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ ಬಂದಿದೆ ಎಂದು ವಿಜಯೇಂದ್ರ ಅವರು ಗಮನ ಸೆಳೆದರು.
ದೊಡ್ಡ ಮನುಷ್ಯರು ಪ್ರಧಾನಿ, ಲಂಡನ್ ಕುರಿತು ಮಾತನಾಡುತ್ತಾರೆ ಎಂದರಲ್ಲದೇ ಲಂಡನ್ ಬಗ್ಗೆ ಮಾತನಾಡಲು ನೀವು ಬೇಕೇ ಎಂದು ಪ್ರಶ್ನಿಸಿದರು. ಬೆಂಗಳೂರಿನ ಮಹಾಜನತೆ ರಾಜ್ಯ ಸರಕಾರದಿಂದ ಉತ್ತರ ಕೇಳುತ್ತಿದ್ದಾರೆ. ತುರ್ತಾಗಿ ಗುಂಡಿ ಮುಚ್ಚುವ ಕೆಲಸ ಆಗಬೇಕೆಂದು ಜನರು ಅಪೇಕ್ಷೆ ಪಡುತ್ತಿದ್ದಾರೆ ಎಂದು ತಿಳಿಸಿದರು.