ವಿಜಯಸಾಕ್ಷಿ ಸುದ್ದಿ, ಹೂವಿನ ಹಡಗಲಿ: ತಾಲೂಕಿನ ಟಿಎಪಿಸಿಎಂಎಸ್ಗೆ ನಡೆದ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿಯೂ ಜಯಗಳಿಸಿದ ಬಿಜೆಪಿ ಪ್ರಪ್ರಥಮ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದರೆ, ಕಾಂಗ್ರೆಸ್ ಪಕ್ಷ ಒಂದೂ ಖಾತೆ ತೆರೆಯದೆ ತೀವ್ರ ಮುಖಭಂಗ ಎದುರಿಸಿದೆ.
ಎ’ ವರ್ಗದ ಸದಸ್ಯ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಬೆನ್ನೂರು ನಿಂಗಪ್ಪ (ಹಗರನೂರು), ರಾಜಶೇಖರ ಗೌಡ (ಇಟಗಿ), ಬಿ.ಎಂ. ವೀರಯ್ಯ (ಹಿರೇಹಡಗಲಿ), **ನೆಪೋಲಿಯನ್** (ಹೊಳಗುಂದಿ), **ಕೆ.** ಮಂಜುನಾಥ (ದಾಸನಹಳ್ಳಿ) ಆಯ್ಕೆಯಾಗಿದ್ದು, ಬಿ’ ವರ್ಗದ ಸದಸ್ಯ ಸ್ಥಾನಕ್ಕೆ ಸಾಮಾನ್ಯವಾಗಿ ಎರಡು ಸ್ಥಾನಗಳಿಗೆ ಮಲ್ಕಿ ಒಡೆಯರ್ ನಾಗಭೂಷಣ-729 ಮತ, ಜಿ. ಮಲ್ಲಪ್ಪ 595 ಮತ ಪಡೆದು ಜಯಶಾಲಿಯಾದರು.
ಪರಿಶಿಷ್ಟ ಜಾತಿಯ ಒಂದು ಸ್ಥಾನಕ್ಕೆ ಚಂದ್ರ ನಾಯಕ್-819 ಮತ ಪಡೆದರೆ, ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಈ. ಮಹಾಂತೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ಬಿ’ ವರ್ಗದ ಒಂದು ಸ್ಥಾನಕ್ಕೆ ಹಕ್ಕಂಡಿ ಮಹಾದೇವ-751 ಮತ, ಹಿಂದುಳಿದ ಎ’ ವರ್ಗದ ಒಂದು ಸ್ಥಾನಕ್ಕೆ ಎ.ಜೆ. ವೀರೇಶ್-676 ಮತ, ಮಹಿಳಾ ಕ್ಷೇತ್ರದ ಎರಡು ಸ್ಥಾನಗಳಿಗೆ ಎಂ. ಸಂಧ್ಯಾ 772 ಮತ, ಹಣ್ಣಿ ಸುಮ 767 ಮತ ಪಡೆದು ವಿಜಯಶಾಲಿಯಾದರು.
ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಶಾಸಕ ಕೃಷ್ಣನಾಯ್ಕ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಪ್ಪ ಹೊಸಮನಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ್ ಹೊಳಗುಂದಿ, ತಾಲೂಕು ಉಪಾಧ್ಯಕ್ಷ ವಿಠಲನಾಯ್ಕ್, ಪುರ ಗ್ರಾಮ ಘಟಕದ ಅಧ್ಯಕ್ಷ ಕಾಗನೂರು ಮಂಜುನಾಥ ಸೇರಿದಂತೆ ರೈತ ಬಾಂಧವರು, ಪಕ್ಷದ ಮುಖಂಡರಾದ ಎಂ.ಬಿ. ಬಸವರಾಜ, ಪೂಜಪ್ಪ, ಈಟಿ ಲಿಂಗರಾಜ್, ವಾರದ ಗೌಸ್ ಮೋದಿನ್, ಪುನೀತ್ ದೊಡ್ಮಣಿ ಅಭಿನಂದಿಸಿದ್ದಾರೆ.



