ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರು ಬೆಳೆದ ಗೋವಿನಜೋಳವನ್ನು ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಇ-ಟೆಂಡರ್ ಮೂಲಕ ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ತಹಸೀಲ್ದಾರ ಮತ್ತು ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚನ್ನಪ್ಪ ಷಣ್ಮುಖಿ, ಗೋವಿನಜೋಳದ ಸೀಜನ್ ಆರಂಭ ಆಗುತ್ತಿದ್ದಂತೆ ಯಾವುದೇ ಪರವಾನಿಗೆ ಇಲ್ಲದ ಖರೀದಿದಾರರು ನೇರವಾಗಿ ರೈತರ ಮನೆ ಮತ್ತು ಕಣಗಳಿಗೆ ತೆರಳಿ ಖರೀದಿ ಮಾಡಲು ಮುಂದಾಗುತ್ತಾರೆ. ಹೀಗೆ ಖರೀದಿ ಮಾಡುವ ಖರೀದಿದಾರರಿಂದ ರೈತರಿಗೆ ತೂಕದಲ್ಲಿ ಮೋಸ ಆಗುತ್ತಿದೆ. ಅಲ್ಲದೆ ಫಸಲು ಖರೀದಿಸಿದ ನಂತರ ಪೂರ್ಣ ಹಣ ನೀಡದೆ ಸ್ವಲ್ಪ ಹಣ ಕೊಟ್ಟು ಉಳಿದ ಹಣವನ್ನು ಒಂದು ವಾರದಲ್ಲಿ ಕೊಡುವುದಾಗಿ ಹೇಳುತ್ತಾರೆ. ಆದರೆ ವಾರದ ನಂತರ ಅವರು ರೈತರ ಸಂಪರ್ಕ ಸಿಗುವುದೇ ಇಲ್ಲ.
ಕಷ್ಟಪಟ್ಟು ಬೆಳೆ ಬೆಳೆದ ರೈತ ವಿನಾಕಾರಣ ತೊಂದರೆ ಅನುಭವಿಸಬೇಕಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಂಥ ಖರೀದಿದಾರರಿಂದ ರೈತರು ಮೋಸ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ. ಇನ್ನು ಮುಂದೆ ಹೊರಗಡೆ ಗೋವಿನಜೋಳದ ಖರೀದಿಗೆ ಅವಕಾಶ ಕೊಡದೆ ಎಪಿಎಂಸಿಯಲ್ಲೇ ಖರೀದಿ ಆಗುವಂತೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಮೋಸ ಮಾಡುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಂಗನಗೌಡ ಪಾಟೀಲ, ಬಸವರಾಜ ಸೊರಟೂರ, ಮುತ್ತಪ್ಪ ಮಡಿವಾಳರ, ಸಂಗಯ್ಯ ಹಿರೇಮಠ, ಸೋಮಣ್ಣ ಮೋಡಿ ಮತ್ತಿತರರು ಇದ್ದರು.