ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಂಥಾಲಯಗಳು ಓದುಗರ ಜ್ಞಾನ ಹೆಚ್ಚಿಸುವ ಕೇಂದ್ರಗಳಾಗಿವೆ. ಗ್ರಂಥಾಲಯ ಎಲ್ಲಿ ಇರುತ್ತದೆಯೋ ಅಲ್ಲಿ ಜ್ಞಾನಕ್ಕೆ ಹೆಚ್ಚಿನ ಮಹತ್ವವಿರುತ್ತದೆ. ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳುವದಕ್ಕೆ ಯುವಪೀಳಿಗೆ ಮುಂದಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಸಮೀಪದ ಶಿಗ್ಲಿ ಗ್ರಾಮದಲ್ಲಿ ಸೋಮವಾರ ಗ್ರಂಥಾಲಯ ಡಿಜಿಟಲ್ ರೂಪದ `ಅರಿವು’ ಉಪಕೇಂದ್ರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈಗಾಗಲೇ ಅಡ್ರಕಟ್ಟಿ ಸೇರಿದಂತೆ ಮತ್ತಿತರ ಕಡೆ ನೂತನ ಗ್ರಂಥಾಲಯಗಳು ನಿರ್ಮಾಣಗೊಂಡಿದ್ದು, ಇನ್ನು ಕೆಲ ದಿನಗಳಲ್ಲಿ ಪುಟಗಾಂವ್ ಬಡ್ನಿ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ಗ್ರಂಥಾಲಯಗಳು ಜ್ಞಾನ ತುಂಬಿದ ಕಣಜಗಳು. ನಮ್ಮ ನಾಡಿನ ಇತಿಹಾಸ, ಆಚರಣೆ, ಪರಂಪರೆ, ಸಂಸ್ಕೃತಿ ಬಿಂಬಿಸುವ ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಅಗತ್ಯವಿರುವ ಪುಸ್ತಕಗಳು ಗ್ರಂಥಾಲಯಗಳಲ್ಲಿ ಉಚಿತವಾಗಿ ಸಿಗುತ್ತವೆ. ಅವುಗಳ ಉಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಗ್ರಾ.ಪಂ ಅಧ್ಯಕ್ಷೆ ಸಂಗೀತಾ ರಾಘವೇಂದ್ರ
ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಲೋಕಾಯುಕ್ತ ಶಂಕರ ರಾಗಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಕೃಷ್ಣಪ್ಪ ಧರ್ಮರ, ಶ್ರೀಶೈಲ, ಅಪ್ಪಣ್ಣ ನುಲ್ವಿ, ಬಸವರಾಜ ಕಳಸದ, ಅಶೋಕ ಶಿರಹಟ್ಟಿ, ಡಿ.ವೈ. ಹುನಗುಂದ, ರಾಮಣ್ಣ ಲಮಾಣಿ, ಯಲ್ಲಪ್ಪ ತಳವಾರ, ರಾಜಣ್ಣ ಹುಲಗೂರ, ಸೋಮಣ್ಣ ಡಾಣಗಲ್ಲ, ಡಾ. ವಿನೋದ ಹೊನ್ನಿಕೊಪ್ಪ, ಬಸಣ್ಣ ಕರ್ಜಗಿ, ಶೈಲಾ ಹೂಗಾರ, ರೇಣುಕಾ ಅತಡಕರ, ಜಯಶ್ರೀ ತಳವಾರ, ಮಾದೇವಿ ತಳವಾರ, ಮಮತಾಜ್‌ಬೀ ಶಿರಬಡಗಿ, ಹುಸೇನಸಾಬ ಗೂಡೂರ, ಸಂತೋಷ ತಾಂದಳೆ, ಮುದಕಪ್ಪ ಗಾಡದ, ಶಿವಣ್ಣ ಕುರಿ ಮತ್ತಿತರರು ಇದ್ದರು.