ಮನೆ-ಮನೆಗೆ ಪೊಲೀಸ್ ಬೀಟ್

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಪೊಲೀಸ್ ವ್ಯವಸ್ಥೆಯಲ್ಲಿ ಅನುಪಮ ಬದಲಾವಣೆಯ ಮೂಲಕ ಗ್ರಾಮಗಳಲ್ಲಿ ಜನತೆಯ ಸಮಸ್ಯೆ ಆಲಿಸುವ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ಮನೆ-ಮನೆಗೆ ಪೊಲೀಸ್ ಎನ್ನುವ ವಿನೂತನ ಪರಿಕಲ್ಪನೆಯ ಕಾರ್ಯಕ್ರಮದ ನಿಮಿತ್ತ ಡಿಜಿ, ಐಜಿಪಿ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ಕುಸುಗಲ್ಲ ತಾಲೂಕಿನಾದ್ಯಂತ ಅನುಷ್ಠಾನಗೊಳಿಸಿದ್ದಾರೆ.

Advertisement

ಈಗಾಗಲೇ ಗೃಹ ಇಲಾಖೆಯು ರಾಜ್ಯದ ಎಲ್ಲ ಜಿಲ್ಲೆಗಳು ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಮನೆ-ಮನೆ ಬೀಟ್ ಸಂಚಾರಕ್ಕೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಆಯಾ ಪೊಲೀಸ್ ಠಾಣೆಗಳ ಸಿಬ್ಬಂದಿಗಳು ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಲು ಮುಂದಾಗಿದ್ದಾರೆ.

ಮನೆ-ಮನೆಗೆ ತೆರಳಿ ಸಮಸ್ಯೆಗಳನ್ನು ಆಲಿಸುವುದೇ ನೂತನ ಪರಿಕಲ್ಪನೆಯ ಉದ್ದೇಶವಾಗಿದೆ. ಗೃಹ ಇಲಾಖೆಯಿಂದ 27 ಅಂಶಗಳನ್ನು ಅಳವಡಿಸಿಕೊಂಡು ಗ್ರಾಮಗಳಿಗೆ ತೆರಳುವ ಬೀಟ್ ಪೊಲೀಸರು ಒಂದು ಬೀಟ್‌ನಲ್ಲಿ 40ರಿಂದ 50 ಮನೆಗಳ ಸಮೂಹ ಪಟ್ಟಿ ಮಾಡಿ, ಪ್ರತಿ ಸಮೂಹಕ್ಕೆ ಒಬ್ಬ ಮುಖ್ಯಸ್ಥರನ್ನು ನೇಮಿಸಲಾಗುತ್ತದೆ, ನಂತರ ರಿಜಿಸ್ಟರ್ನಲ್ಲಿ ದಾಖಲಿಸಲಾಗುತ್ತದೆ.

ಪೊಲೀಸ್ ಬೀಟ್ ಸಿಬ್ಬಂದಿಗಳು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ, ಶಾಂತಿ ಸುವ್ಯವಸ್ಥೆ, ಸೌಹಾರ್ದತೆ, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ, ಪೊಲೀಸರ ಬಗ್ಗೆ ನಂಬಿಕೆ, ಅಲ್ಲದೇ ಮನೆ ಯಜಮಾನರ ದೂರವಾಣಿ ಸಂಖ್ಯೆ ಸಂಗ್ರಹಿಸುವುದು, ಕುಟುಂಬಸ್ಥರ ಸಮಸ್ಯೆಯನ್ನು ರಿಜಿಸ್ಟರ್‌ಗಳಲ್ಲಿ ದಾಖಲಿಸಿ ಪ್ರತಿ ತಿಂಗಳ 2ನೇ ಶನಿವಾರ ಸಮೂಹದ ಮುಖ್ಯಸ್ಥರು ಮತ್ತು ಸಾರ್ವಜನಿಕರ ಸಭೆ ನಡೆಸಲು ಇಲಾಖೆ ಮುಂದಾಗಿರುವುದು ಜನಸಾಮಾನ್ಯರಲ್ಲಿ ಹೊಸ ಭರವಸೆ ಮೂಡಿಸಿದೆ.

ಗದಗ ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆ ಮೇರೆಗೆ ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ಕುಸುಗಲ್ಲ ಅವರು ಪೊಲೀಸ್ ಸಿಬ್ಬಂದಿಗಳ ತಂಡಗಳನ್ನು ರಚನೆ ಮಾಡಿದ್ದಾರೆ. ಪೊಲೀಸ್ ಬೀಟ್ ತಂಡ ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದಾರೆ. ಪ್ರತಿ ಬೀಟ್ ತಂಡ ಗ್ರಾಮಗಳಲ್ಲಿ 40ರಿಂದ 50 ಮನೆಗಳಿಗೆ ಭೇಟಿ ನೀಡುವ ಕಾರ್ಯ ಪ್ರಾರಂಭ ಮಾಡಿದೆ.

ಮನೆ-ಮನೆಗೆ ಪೊಲೀಸ್ ಬೀಟ್ ಸಂಚಾರದ ಭೇಟಿಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಸಿಬ್ಬಂದಿಗಳ ಬೀಟ್ ರಚಿಸಿ ವಿವಿಧ ಗ್ರಾಮಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುವುದು, ಜನರಲ್ಲಿ ಸೌಹಾರ್ದತೆ ಮೂಡಿಸುವುದು ಮತ್ತು ಸಮಸ್ಯೆಗಳನ್ನು ಆಲಿಸುವಂತೆ ತಿಳಿಸಲಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರು ದೇಶದ ಮತ್ತು ರಾಜ್ಯದ ಹಿತಕ್ಕಾಗಿ ಸಂವಿಧಾನದ ಪರಿಪಾಲನೆಯ ಮೂಲಕ ನಗರದ ಗ್ರಾಮೀಣ ಜನರು ಸೌಹಾರ್ದತೆಯಿಂದ ನಡೆದುಕೊಂಡಾಗ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ಇದರಿಂದ ನಗರ, ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬಹುದು.
ರೋಹನ್ ಜಗದೀಶ,
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.


Spread the love

LEAVE A REPLY

Please enter your comment!
Please enter your name here