ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗದಗ-ಬೆಂಗಳೂರು ಮಾರ್ಗವಾಗಿ ಅ.17ರಿಂದ ಕೆಎಸ್ಆರ್ಟಿಸಿಯಿಂದ ‘ಪಲ್ಲಕ್ಕಿ’ ನಾನ್-ಎಸಿ ಸ್ಲೀಪರ್ ಬಸ್ ಸಂಚಾರ ಪ್ರಾರಂಭಗೊಳ್ಳಲಿದ್ದು, ಶಿರಹಟ್ಟಿ, ಲಕ್ಷ್ಮೇಶ್ವರ ಭಾಗದ ಜನರಿಗೆ ದೀಪಾವಳಿ ಉಡುಗೊರೆಯಾದಂತಾಗಿದೆ.
ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಜನರು ಬೆಂಗಳೂರಿಗೆ ಹೋಗಲು ಕೆಎಸ್ಆರ್ಟಿಸಿ ಸ್ಲೀಪರ್ ಬಸ್ಸಿನ ವ್ಯವಸ್ಥೆ ಇಲ್ಲದದ್ದರಿಂದ ಅನಿವಾರ್ಯವಾಗಿ ಖಾಸಗಿ ಬಸ್ಸಿನ ಮೊರೆ ಹೋಗಬೇಕಾಗಿತ್ತು. ಅಲ್ಲದೇ ಬಸ್ಸಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲದದ್ದರಿಂದ ಜನರು ಸಮಸ್ಯೆ ಅನುಭವಸುತ್ತಿದ್ದರು. ಆದ್ದರಿಂದ ಗದಗದಿಂದ ಶಿರಹಟ್ಟಿ, ಮಾಗಡಿ, ಲಕ್ಷ್ಮೇಶ್ವರ, ಸವಣೂರ, ಹಾವೇರಿ ಮಾರ್ಗವಾಗಿ ಕೆಎಸ್ಆರ್ಟಿಸಿಯಿಂದ ‘ಪಲ್ಲಕ್ಕಿ’ ನಾನ್-ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸುವಂತೆ ಇತ್ತೀಚೆಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿ ಸಚಿವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.
ಶಾಸಕರ ಪ್ರಯತ್ನದ ಫಲವಾಗಿ ಅ.17ರಿಂದ ಪ್ರತಿದಿನ ರಾತ್ರಿ 10 ಗಂಟೆಗೆ ಗದಗದಿಂದ ಮತ್ತು ಇದೇ ಸಮಯಕ್ಕೆ ಬೆಂಗಳೂರುನಿಂದ ಪಲ್ಲಕ್ಕಿ ಬಸ್ ಪ್ರಾರಂಭಗೊಳ್ಳುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಡಾ. ಚಂದ್ರು ಲಮಾಣಿ, ಕ್ಷೇತ್ರದ ಜನರ ಸಂಚಾರದ ಅನುಕೂಲತೆಗಾಗಿ ಗದಗ- ಬೆಂಗಳೂರು ಮಾರ್ಗದಲ್ಲಿ ಕಲ್ಯಾಣ ರಥ ಅಥವಾ ಪಲ್ಲಕ್ಕಿ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೇ ಗದಗದಿಂದ ಶಿರಹಟ್ಟಿ, ಮಾಗಡಿ, ಲಕ್ಷ್ಮೇಶ್ವರ ಮಾರ್ಗವಾಗಿ ಸಂಚರಿಸಬೇಕಾಗುತ್ತದೆ ಎಂದು ಮನವಿ ಮಾಡಿದ್ದೆ. ಸದ್ಯಕ್ಕೆ ಶಿರಹಟ್ಟಿ ಮಾರ್ಗವಾಗಿ ಪ್ರಾರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಮಾಗಡಿ-ಲಕ್ಷ್ಮೇಶ್ವರ ಮೂಲಕ ಸಂಚರಿಸುವಂತೆ ಕೋರಲಾಗುವುದು. ಸಚಿವರ ಸಕಾರಾತ್ಮಕ ಸ್ಪಂದನೆಗೆ ಧನ್ಯವಾದಗಳು ಎಂದರು.


