ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಹುಲಕೋಟಿಯ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ `ವಿಶ್ವ ಆಹಾರ ದಿನಾಚರಣೆ’ ಕಾರ್ಯಕ್ರಮವನ್ನು ಕೆವಿಕೆ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್ ಮಾತನಾಡಿ, ಗ್ರಾಮೀಣ ಯುವಕರು ಕೃಷಿಯಿಂದ ವಿಮುಖವಾಗಿ ಪಟ್ಟಣದ ಕಡೆ ವಲಸೆ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದಕತೆ ಹಾಗೂ ಆಹಾರ ಭದ್ರತೆಗೆ ಬಲವಾದ ಪೆಟ್ಟು ಬೀಳಬಹುದು. ಹಿಂಗಾರಿಯಲ್ಲಿ ಬೆಳೆಯುವ ಕಸುಬೆ ಹಾಗೂ ಸೂರ್ಯಕಾಂತಿ ಬೆಳೆಯ ಬೀಜಗಳು ಇಲಾಖೆಯಲ್ಲಿ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಅಣ್ಣಿಗೇರಿ ಕೃಷಿ ಸಂಶೋಧನಾ ಕೇಂದ್ರದ ಡಾ. ಬಿ.ಎನ್. ಮೊಟಗಿ ಮಾತನಾಡಿ, ವಿಶ್ವ ಆಹಾರ ದಿನಾಚರಣೆಯ ಮಹತ್ವ ಹಾಗೂ ಎಣ್ಣೆ-ಕಾಳುಗಳ ಬೆಳೆಗಳಲ್ಲಿ ಸುಧಾರಿತ ತಳಿಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ಮಂಕಣಿ ಮಾತನಾಡಿ, ಗ್ರಾಮೀಣ ಮಹಿಳೆಯರು ಕುಟುಂಬದ ಪೌಷ್ಠಿಕ ಭದ್ರತೆಗಾಗಿ, ಮನೆಯ ಹಿತ್ತಲಿನಲ್ಲಿ ಅಥವಾ ಹೊಲಗಳಲ್ಲಿ ಸಾವಯವ ಪದ್ಧತಿ ಅನುಸರಿಸಿ ಪೌಷ್ಠಿಕ ಕೈತೋಟ ನಿರ್ಮಾಣ ಮಾಡಬೇಕೆಂದು ಹೇಳಿದರಲ್ಲದೆ, ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಆಹಾರವೇ ಕಾರಣ. ಈ ನಿಟ್ಟಿನಲ್ಲಿ ಜಾಗೃತರಾಗಿ ಪೌಷ್ಠಿಕಯುಕ್ತ ಆಹಾರವನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಹೊಂದಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಸಹಾಯಕ ನಿರ್ದೇಶಕರಾದ ಸೀಮಾ ಸವನೂರ, ಆತ್ಮ ಯೋಜನೆಯ ಯೋಜನಾ ನಿರ್ದೇಶಕರಾದ ಮಂಜುನಾಥ ಭರಮಗೌಡರ ಪಾಲ್ಗೊಂಡಿದ್ದರು.