ಇ-ಕೆವೈಸಿ ವ್ಯಾಲಿಡೇಶನ್ ತುರ್ತಾಗಿ ಪೂರ್ಣಗೊಳಿಸಿ: ರಾಮಣ್ಣ ದೊಡ್ಡಮನಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್ಗಳ ಇ-ಕೆವೈಸಿ ವ್ಯಾಲಿಡೇಶನ್ ಅನ್ನು ತುರ್ತಾಗಿ ಪೂರ್ಣಗೊಳಿಸಲು ಶಿರಹಟ್ಟಿ ತಾಲೂಕು ಪಂಚಾಯಿತಿ ಸಿಬ್ಬಂದಿಗಳಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಸೂಚಿಸಿದರು.

Advertisement

ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಿರಹಟ್ಟಿ ತಾಲೂಕುಗಳ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಕರ ವಸೂಲಿಗಾರರು, ಮನರೇಗಾ ಸಿಬ್ಬಂದಿಗಳಾದ ಜಿಕೆಎಂ, ಬಿಎಫ್‌ಟಿ, ಇಂಜಿನಿಯರ್‌ಗಳು ಮತ್ತು ಒಐಕೆಒ ಸಿಬ್ಬಂದಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶದಂತೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯಂತೆ ಶಿರಹಟ್ಟಿ ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ ಅನ್ನು ಇ-ಕೆವೈಸಿ ಮುಖಾಂತರ ವ್ಯಾಲಿಡೇಟ್ ಮಾಡಲಾಗುತ್ತಿದೆ. ನರೇಗಾ ಯೋಜನೆಯ ಎಲ್ಲ ಗ್ರಾ.ಪಂಗಳ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ವ್ಯಾಲಿಡೇಶನ್ ಅಭಿಯಾನದ ಮಾದರಿಯಲ್ಲಿ ಅತೀ ತುರ್ತಾಗಿ ಇ-ಕೆವೈಸಿ ಮುಖಾಂತರ ಪೂರ್ಣಗೊಳಿಸಲು ಸೂಚಿಸಿದ್ದಾರೆ.

ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರಲ್ಲಿ ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಎನ್‌ಎಮ್‌ಎಂಎಸ್ ಮೊಬೈಲ್ ತಂತ್ರಾಂಶದಲ್ಲಿ ಇ-ಕೆವೈಸಿ ಮಾಡುವ ಬಗ್ಗೆ ಈಗಾಗಲೇ ಎಲ್ಲ ಗ್ರಾಮ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಮನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರ ಮಾಹಿತಿಯನ್ನು ಎನ್‌ಎಮ್‌ಎಂಎಸ್ (ನರೇಗಾ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ತಂತ್ರಾಂಶದಲ್ಲಿ ಇ-ಕೆವೈಸಿ ಮೂಲಕ ಅಪ್‌ಡೇಟ್ ಮಾಡಲಾಗುತ್ತಿದೆ. ಈಗಾಗಲೇ ಗ್ರಾಮ ಮಟ್ಟದಲ್ಲಿ ಜನರಿಗೆ ಈ ಕುರಿತು ಜಾಗೃತಿ ಮೂಡಿಸಲಾಗಿದ್ದು, ಶಿರಹಟ್ಟಿ ತಾಲೂಕು ನರೇಗಾ ಶಾಖೆಯ ಐಇಸಿ ವಿಭಾಗವು ತಯಾರಿಸಿದ ಧ್ವನಿ ಮುದ್ರಿಕೆಯನ್ನು ಕಸ ಸಂಗ್ರಹ ವಾಹನಗಳ ಮೂಲಕ ಪ್ರಸಾರ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಉಚಿತವಾಗಿ ನಡೆಸಲಾಗುತ್ತಿದ್ದು, ಮೇಟ್‌ಗಳ ಮೂಲಕವೂ ಈ ಸೌಲಭ್ಯವನ್ನು ಪಡೆಯಬಹುದು. ಇ-ಕೆವೈಸಿ ಯೋಜನೆಯು ಮನರೇಗಾ ಕಾರ್ಯಕ್ರಮದ ಪಾರದರ್ಶಕ ಅನುಷ್ಠಾನಕ್ಕೆ ಮಹತ್ವದ ಹೆಜ್ಜೆಯಾಗಿದೆ. ಆದ್ದರಿಂದ, ಎಲ್ಲಾ ಕೂಲಿಕಾರರು ಮತ್ತು ಕಾಯಕ ಬಂಧುಗಳು ಕಡ್ಡಾಯವಾಗಿ ಇ-ಕೆವೈಸಿ ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿ, ಡಿಇಒ, ಬಿಎಫ್‌ಟಿ, ಜಿಕೆಎಂ ಅವರನ್ನು ಸಂಪರ್ಕಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದ್ದು, ಈ ಅಭಿಯಾನ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಸಭೆಯಲ್ಲಿ ಕರೆ ನೀಡಲಾಯಿತು.

ಗ್ರಾಮ ಪಂಚಾಯಿತಿ ಮಟ್ಟದ ಸಿಬ್ಬಂದಿಗಳಿಗೆ ಇ-ಕೆವೈಸಿ ಅಪ್‌ಡೇಟ್ ಕಾರ್ಯಕ್ಕೆ ತರಬೇತಿ ನೀಡಲಾಗಿದ್ದು, ಈ ಮೂಲಕ ಪ್ರಗತಿ ಸಾಧಿಸಲು ಸೂಚನೆ ನೀಡಲಾಗಿದೆ. ಆದರೆ, ಕೆಲವು ಗ್ರಾಮಗಳಲ್ಲಿ ಕೂಲಿಕಾರರು ವೈಯಕ್ತಿಕ ಕೆಲಸಕ್ಕಾಗಿ ಮನೆಯಿಂದ ಹೊರಗಡೆ ಇರುವುದರಿಂದ, ಮನೆ-ಮನೆ ಭೇಟಿಯ ಸಂದರ್ಭದಲ್ಲಿ ಮೇಟ್‌ಗಳು ಅಥವಾ ನರೇಗಾ ಸಿಬ್ಬಂದಿಗೆ ಅವರು ಲಭ್ಯವಾಗದಿರುವುದು ಇ-ಕೆವೈಸಿ ಪ್ರಕ್ರಿಯೆ ನಿಧಾನಗೊಳಿಸಿದೆ. ಇದರಿಂದ ಭವಿಷ್ಯದಲ್ಲಿ ಕೂಲಿಕಾರರಿಗೆ ಕೆಲಸ ನೀಡುವಾಗ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಸೂಚನೆ ನೀಡಿದರು.


Spread the love

LEAVE A REPLY

Please enter your comment!
Please enter your name here