ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮತ್ತು ಹಿರಿಯ ನಾಯಕನಾಗಿ ಸೇವೆ ಸಲ್ಲಿಸುತ್ತಿರುವ ರೋಣ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಬೇಕೆಂದು ನರೇಗಲ್ಲ ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರರನ್ನು ಜೋರಾಗಿ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರತುಪಡಿಸಿದ್ದು, ರೋಣ ತಾಲೂಕಿನ ಶಾಸಕರಾಗಿ ಜಿ.ಎಸ್. ಪಾಟೀಲರು ಹಲವು ಜನಪರ ಕಾರ್ಯಗಳಲ್ಲಿ ಶ್ರಮಿಸಿ ಮತಕ್ಷೇತ್ರದ ಜನಮನ ಗೆದ್ದಿದ್ದಾರೆ ಎಂದು ಹೇಳಿದ್ದಾರೆ. “ಸಾವಿರ ಕೆರೆಗಳ ಸರದಾರ” ಎಂಬ ಬಿರುದು ಹೊಂದಿರುವ ಅವರಿಗೆ ಹಲವು ಬಾರಿ ಸಚಿವ ಸ್ಥಾನ ಕೈತಪ್ಪಿದೆ. ಆದ್ದರಿಂದ ಈ ಬಾರಿ ಅವರು ಸಚಿವ ಸ್ಥಾನ ಪಡೆಯಬೇಕು ಎಂದು ಗದಗ ಜಿಲ್ಲಾ ಕಾಂಗ್ರೆಸ್ ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ಕೆ.ಬಿ. ಧನ್ನೂರ ಬಲವಾಗಿ ಒತ್ತಾಯಿಸಿದ್ದಾರೆ.
ಜಿ.ಎಸ್. ಪಾಟೀಲರು ರೋಣ ಮತಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿದ್ದಾರೆ. ಆದರೆ ಇವರೆಗೆ ಅವರಿಗೆ ಸಚಿವ ಸ್ಥಾನ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರರಿಗೆ ಶಹರ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ ಅವರು ಈ ವಿಚಾರದಲ್ಲಿ ಮನವಿ ಮಾಡಿದ್ದು, ರೋಣ ಮತಕ್ಷೇತ್ರದ ಜಿ.ಎಸ್. ಪಾಟೀಲರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕಾಗಿ ಕೋರಿದ್ದಾರೆ.
ಈ ಪತ್ರಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಕಾಂಗ್ರೆಸ್ ಶಹರ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೈಲಾರಪ್ಪ ಗೋಡಿ, ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಮಹಿಳಾ ಘಟಕದ ಬ್ಲಾಕ್ ಘಟಕದ ಅಧ್ಯಕ್ಷೆ ಮಂಜುಳಾ ರೇವಡಿ, ಶಹರ ಘಟಕದ ಮಹಿಳಾ ಅಧ್ಯಕ್ಷೆ ರೇಣುಕಾ ಧರ್ಮಾಯತ, ಎಪಿಎಂಸಿ ಮಾಜಿ ಉಪಾಧ್ಯಕ್ಷ ನಿಂಗನಗೌಡ ಲಕ್ಕನಗೌಡ್ರ, ಬಾಳಪ್ಪ ಸೋಮಗೊಂಡ, ಪಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅಂದಾನಗೌಡ ಮಲ್ಲನಗೌಡ್ರ, ಸದಸ್ಯ ನಿಂಗನಗೌಡ ಪಾಟೀಲ ಹಾಗೂ ಕಾರ್ಯಕರ್ತ ಅಲ್ಲಾಭಕ್ಷಿ ನದಾಫ್ ಮುಂತಾದವರು ಸಹಿ ಮಾಡಿದ್ದಾರೆ.