ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್ಗಳ ಇ-ಕೆವೈಸಿ ವ್ಯಾಲಿಡೇಶನ್ ಕಾರ್ಯವನ್ನು ಶಿರಹಟ್ಟಿ ತಾಲ್ಲೂಕಿನ ಎಲ್ಲಾ ಸಿಬ್ಬಂದಿಗಳು ತುರ್ತು ಕ್ರಮವಾಗಿ ಪೂರ್ಣಗೊಳಿಸಲು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಸೂಚಿಸಿದರು.
ತಾವು ಶಿರಹಟ್ಟಿ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದಾಗ, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶ ಮತ್ತು ಬೆಂಗಳೂರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಸೂಚನೆಯಂತೆ, ಶಿರಹಟ್ಟಿ ತಾಲ್ಲೂಕಿನಲ್ಲಿ ಮನರೇಗಾ ಯೋಜನೆಯ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ಗಳನ್ನು ಇ-ಕೆವೈಸಿ ಮೂಲಕ ವ್ಯಾಲಿಡೇಟ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನರೇಗಾ ಯೋಜನೆಯ ಎಲ್ಲಾ ಗ್ರಾಮ ಪಂಚಾಯತ್‌ಗಳ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ವ್ಯಾಲಿಡೇಶನ್ ಅಭಿಯಾನವನ್ನು ಮಾದರಿಯಾಗಿ, ಅತೀ ತುರ್ತುವಾಗಿ ಇ-ಕೆವೈಸಿ ಮೂಲಕ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಎನ್‌ಎಂಎಎಎಸ್ ಮೊಬೈಲ್ ತಂತ್ರಾಂಶದಲ್ಲಿ ಇ-ಕೆವೈಸಿ ಮಾಡುವ ಬಗ್ಗೆ ಈಗಾಗಲೇ ಗ್ರಾಮ ಪಂಚಾಯತ್ ಹಾಗೂ ಗ್ರಾಮ ಮಟ್ಟದಲ್ಲಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿರಹಟ್ಟಿ ತಾಲೂಕಿನ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು, ಕರ ವಸೂಲಿಗಾರರು, ಜಿಕೆಎಂ, ಬಿಎಫ್‌ಟಿ, ಇಂಜಿನಿಯರ್‌ಗಳು ಮತ್ತು ಓಖಐಒ ಸಿಬ್ಬಂದಿಗಳು ಉಪಸ್ಥಿತರಿದ್ದರು.