ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಗಜೇಂದ್ರಗಡ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹಾಗೂ ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ ಆಗ್ರಹಿಸಿದ್ದಾರೆ.
ಅವರು ಗುರುವಾರ ಪಟ್ಟಣದ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರು ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ತಮ್ಮ ಸೇವೆಯನ್ನು ಪಕ್ಷಕ್ಕೆ ಸಲ್ಲಿಸುತ್ತಾ ಬಂದಿದ್ದಾರೆ. ಗದಗ ಜಿಲ್ಲೆ ಸೇರಿದಂತೆ ನಾಡಿನಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದಾರೆ. ಪಕ್ಷದ ವರಿಷ್ಠರು ನೀಡಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ಪೂರೈಸಿದ್ದಾರೆ. ಪಕ್ಷದ ಹಿರಿಯ ನಾಯಕರು ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು ಎಂದರು.
ಶಾಸಕ ಜಿ.ಎಸ್. ಪಾಟೀಲ ಜಾತ್ಯಾತೀತ ಮನೋಭಾವದ ನಾಯಕರಾಗಿದ್ದಾರೆ. ಅವರು ಎಲ್ಲ ಧರ್ಮಗಳ ಜನರೊಂದಿಗೆ ಬೆರೆತು ಕೆಲಸ ಮಾಡುವ ವ್ಯಕ್ತಿಯಾಗಿದ್ದು, ಜಿಲ್ಲೆಯ ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷ ಬಲಿಷ್ಠಗೊಂಡಿದೆ ಎನ್ನುವುದನ್ನು ಯಾರು ಕೂಡ ತಳ್ಳಿಹಾಕುವಂತಿಲ್ಲ. ಅವರ ನಿಸ್ವಾರ್ಥ ಸೇವೆ ಪಕ್ಷದ ನಾಯಕರಿಗೂ ತಿಳಿದ ಸಂಗತಿಯಾಗಿದ್ದು, ಕೂಡಲೇ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವ ಮೂಲಕ ರೋಣ ಮತಕ್ಷೇತ್ರಕ್ಕೆ ನ್ಯಾಯ ಒದಗಿಸಬೇಕು. ಎಂದರು.



