ಬೆಂಗಳೂರು: ಓಲಾ ಎಲೆಕ್ಟ್ರಿಕ್ ಕಂಪನಿಯ ಉದ್ಯೋಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಕೆ. ಅರವಿಂದ್ ವಿಷ ಸೇವಿಸಿ ಸಾವನ್ನಪ್ಪಿದ ಸಿಬ್ಬಂದಿ. ಈ ಸಂಬಂಧ ಕಂಪನಿಯ ಹೋಮೋಲೊಗೇಷನ್ ಇಂಜಿನಿಯರ್ ಸುಬ್ರತ್ ಕುಮಾರ್ ದಾಸ್ ಸೇರಿದಂತೆ ಮೂವರ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೊದಲಿಗೆ ಪ್ರಕರಣವನ್ನು ಯೂಡಿಆರ್ ಎಂದು ದಾಖಲಿಸಲಾಗಿತ್ತು. ನಂತರ ಅರವಿಂದ್ ಅವರ ಕೋಣೆಯಿಂದ 28 ಪುಟದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಕೆಲಸದ ಸ್ಥಳದಲ್ಲಿ ಕಿರುಕುಳ, ಮಾನಸಿಕ ಒತ್ತಡ ಮತ್ತು ವೇತನ ನಿಲ್ಲಿಸುವ ವಿಚಾರ ಉಲ್ಲೇಖವಾಗಿದೆ.
ಸಾವಿನ ನಂತರ ಕಂಪನಿ ₹17 ಲಕ್ಷ ಹಣವನ್ನು ಅರವಿಂದ್ ಅವರ ಖಾತೆಗೆ ಜಮಾ ಮಾಡಿದ್ದು, ಪ್ರಕರಣದ ಬಗ್ಗೆ ಹೊಸ ಅನುಮಾನ ಮೂಡಿಸಿದೆ.
ಅರವಿಂದ್ ಅವರ ಸಹೋದರ ಅಶ್ವಿನ್ ಕಣ್ಣನ್ ಅವರು ನೀಡಿದ ದೂರು ಪ್ರಕಾರ, ಕಂಪನಿ ಹಣಕಾಸು ವ್ಯವಹಾರಗಳ ತಪ್ಪನ್ನು ಮರೆಮಾಚಲು ನನ್ನ ತಮ್ಮನ ಮೇಲೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.