ಬೆಂಗಳೂರು: ನಗರದ ಜಿಟಿ ಮಾಲ್ನಲ್ಲಿ ಭೀಕರ ಘಟನೆ ಸಂಭವಿಸಿದೆ. ಮಾಲ್ನ ಮೂರನೇ ಮಹಡಿಯಿಂದ ವ್ಯಕ್ತಿಯೋರ್ವ ಬಿದ್ದು ಸಾವನ್ನಪ್ಪಿದ್ದಾನೆ.
ಸುಮಾರು 40 ವರ್ಷದ ಈ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆಯ ನಂತರ ಕೆಪಿ ಅಗ್ರಹಾರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ, ವ್ಯಕ್ತಿ ಕಾಲುಜಾರಿ ಬಿದ್ದನಾ ಅಥವಾ ಆತ್ಮಹತ್ಯೆ ಮಾಡಿಕೊಂಡನಾ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಮೃತನು ಮಾಲ್ನ ಸಿಬ್ಬಂದಿನಾ ಅಥವಾ ಗ್ರಾಹಕನಾ ಎಂಬುದನ್ನೂ ವಿಚಾರಣೆ ಮಾಡುತ್ತಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಪ್ರಕಾರ, ವ್ಯಕ್ತಿ ಹೊರಗಿನಿಂದ ಬಂದು ಅಲ್ಪ ಸಮಯದಲ್ಲೇ ಮೂರನೇ ಮಹಡಿಯಿಂದ ಬಿದ್ದಿದ್ದಾನೆ. ಬಿದ್ದ ನಂತರ ಸುಮಾರು 10 ನಿಮಿಷ ಜೀವಂತನಾಗಿದ್ದರೂ, ಬಳಿಕ ಮೃತಪಟ್ಟಿದ್ದಾನೆ.
ಘಟನೆಯ ಬಳಿಕ ಮಾಲ್ನೊಳಗಿನ ಬೆಳಗಿನ ಮೂವಿ ಶೋಗಳನ್ನು ರದ್ದು ಮಾಡಲಾಗಿದೆ. ಮೃತನ ಬಳಿ ಮೊಬೈಲ್, ಪರ್ಸ್ ಸೇರಿದಂತೆ ಯಾವುದೇ ದಾಖಲೆಗಳು ಸಿಕ್ಕಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.