ವಿಜಯಸಾಕ್ಷಿ ಸುದ್ದಿ, ಗದಗ: ಗುರು ಎಂದರೆ ಮಾರ್ಗದರ್ಶಕ, ಬೆಳಕಿನ ದಾರಿಯನ್ನು ತೋರಿಸುವವನು. ಗುರಿ ಎಂದರೆ ಬದುಕಿನ ಉದ್ದೇಶ, ಸಾಧನೆ ಅಥವಾ ಕನಸು. ಜೀವನದಲ್ಲಿ ಒಬ್ಬ ಗುರು, ಮಾರ್ಗದರ್ಶಕ ಅಥವಾ ಪ್ರೇರಣಾದಾಯಕ ವ್ಯಕ್ತಿಯಿಲ್ಲದೆ ಮಕ್ಕಳು ಯಶಸ್ಸು ಸಾಧಿಸುವುದು ಕಷ್ಟ. ಗುರುವು ನಮ್ಮೊಳಗಿನ, ಅಂದರೆ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವಂತೆ ಮಾಡುತ್ತಾನೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಮುನ್ನೋಟ ಸಭೆ–2026ರಲ್ಲಿ ಫಲಿತಾಂಶ ವೃದ್ಧಿಗಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ವಿವಿಧ ಅಂಶಗಳು ಹಾಗೂ ಎಸ್‌ಎಂ1 ಫಲಿತಾಂಶ ವಿಶ್ಲೇಷಣೆ ಮಾಡಿ ನಿರ್ದಿಷ್ಟ ಗುರಿ ಹಾಗೂ ಬದ್ಧತೆಯೊಂದಿಗೆ ಕೆಲಸ ನಿರ್ವಹಿಸುವುದು, ಎಲ್‌ಬಿಎಗಳನ್ನು ಪಾಠಗಳ ಪೂರ್ವಸಿದ್ಧತೆಯಲ್ಲಿ ಬಳಸಿಕೊಂಡು ಮಗುವಿಗೆ ಚಿಕಿತ್ಸಕ ವಿಧಾನದಲ್ಲಿ ಮಗುವಿನ ಮಟ್ಟಕ್ಕೆ ಇಳಿದು, ಪಾಠದ ಉದ್ದೇಶವನ್ನರಿತು ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಕಲಿಕಾ-ಬೋಧನೋಪಕರಣ ಹಾಗೂ ತಂತ್ರಜ್ಞಾನದ ಸಾಮಗ್ರಿಗಳನ್ನು ಬಳಸಿಕೊಂಡು ಮಗುವಿನ ಭಾಗವಹಿಸಿಕೆಯೊಂದಿಗೆ ಚಟುವಟಿಕೆ ಆಧಾರಿತವಾಗಿ ಪರಿಣಾಮಕಾರಿ ಬೋಧಿಸುವ-ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ, ಡಯಟ್ ಪ್ರಾಚಾರ್ಯರಾದ ಮಂಗಳಾ ತಾಪಸ್ಕರ್, ಎಸ್‌ಎಸ್‌ಎಲ್‌ಸಿ ಜಿಲ್ಲಾ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೇರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಿವೈಪಿಸಿಗಳಾದ ಎಂ.ಎಚ್. ಕಂಬಳಿ, ರವಿಪ್ರಕಾಶ್ ಎಸ್.ಎನ್, ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್‌ನ ಹಿರಿಯ ಉಪನ್ಯಾಸಕರು, ಜಿಲ್ಲೆಯ ಶಾಲಾ ದತ್ತು ಅಧಿಕಾರಿಗಳು, ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು. ಕಾರ್ಯಕ್ರಮವನ್ನು ಎಂ.ಎ. ಯರಗುಡಿ ನಿರೂಪಿಸಿದರು. ಎಂ.ಎಚ್. ಕಂಬಳಿ ವಂದಿಸಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಫ್. ಪೂಜಾರ ಮಾತನಾಡಿ, ಇಲಾಖೆ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವೆಲ್ಲಾ ಬೆನ್ನೆಲುಬಾಗಿರುತ್ತೇವೆ. ಜೊತೆಗೆ ಅತ್ಯುತ್ತಮ ಫಲಿತಾಂಶ ನಮ್ಮ ಧ್ಯೇಯವಾಗಿರಲಿ ಎಂದು ತಿಳಿಸಿದರು.