ಬೆಂಗಳೂರು:- ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿದೆ. ಸಂವಿಧಾನ ವಿರೋಧಿ ಕೆಲಸಗಳಿಗೆ ಕೊನೆ ಬಿದ್ದಿರುವುದು ಪೊಲೀಸ್ ಇಲಾಖೆಯ ಶ್ರೇಯಸ್ಸು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದ ಅವರು ಮಾತನಾಡಿದರು. “ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿರುವುದು ಸಂತೋಷದ ವಿಷಯ. ಮಾದಕ ವಸ್ತು ಹಾವಳಿಗೂ ತಡೆ ಬಿದ್ದಿದ್ದು, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು,” ಎಂದು ಸಿಎಂ ಹೇಳಿದರು.
ಪರಿಶಿಷ್ಠ ಜಾತಿ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ DCRE ಪೊಲೀಸ್ ಠಾಣೆಗಳನ್ನು ಕಾರ್ಯೋನ್ಮುಖಗೊಳಿಸಿದ್ದೇವೆ. ಇವು ಸಂವಿಧಾನಿಕ ಹಕ್ಕು ಹಾಗೂ ಮೌಲ್ಯಗಳನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ ಎಂದರು.
ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿ ದೇಶದಾದ್ಯಂತ 191 ಮಂದಿ ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾಗಿದ್ದಾರೆ. “ಅವರ ಬಲಿದಾನಕ್ಕೆ ಬೆಲೆ ಕಟ್ಟಲಾಗದು. ದೇಶದ ಪ್ರತಿಯೊಬ್ಬರೂ ಇವರನ್ನು ಸ್ಮರಿಸಬೇಕು,” ಎಂದು ಸಿಎಂ ನಮನ ಸಲ್ಲಿಸಿದರು.
ಪೊಲೀಸ್ ಇಲಾಖೆ ಸಂವಿಧಾನದಲ್ಲಿ ಜನರಿಗೆ ನೀಡಿರುವ ಹಕ್ಕುಗಳನ್ನು ಕಾಪಾಡುವ ಕಾರ್ಯವನ್ನು ನಿರ್ವಹಿಸುತ್ತಿದೆ. ಕೋಮು ಶಕ್ತಿಗಳು ಮತ್ತು ದುಷ್ಟ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಪೊಲೀಸರ ಪಾತ್ರ ಅಗ್ರಗಣ್ಯ ಎಂದು ಸಿಎಂ ಹೇಳಿದರು.
ಸಿಎಂ ಘೋಷಿಸಿದ ಹೊಸ ಕ್ರಮಗಳು:-
116 ಮಂದಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ಹೊರಡಿಸಲಾಗಿದೆ.
ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯ ವೈದ್ಯಕೀಯ ಮರುಪಾವತಿ ವೆಚ್ಚವನ್ನು ₹1 ಲಕ್ಷದಿಂದ ₹1.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಎಲ್ಲಾ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು ₹1000ರಿಂದ ₹1500ಕ್ಕೆ ಹೆಚ್ಚಿಸಲಾಗಿದೆ.