ಬೆಂಗಳೂರು: ಮುಖ್ಯಮಂತ್ರಿ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯ ಮೇರೆಗೆ, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಾಲಯಗಳಲ್ಲಿ ನಾಳೆ (ದೀಪಾವಳಿ/ಬಲಿಪಾಡ್ಯಮಿ ದಿನ) ಗೋ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲು ಆದೇಶ ಹೊರಡಿಸಲಾಗಿದೆ.
ಹಿಂದೂ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಸ್ಥಾನಮಾನವಿದ್ದು, “ಗೋಮಾತೆ” ಎಂಬ ಹೆಸರಿನಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ದೀಪಾವಳಿ (ಬಲಿಪಾಡ್ಯಮಿ) ದಿನದಂದು ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಗೋಮಾತೆಗಳಿಗೆ ಸ್ನಾನ ಮಾಡಿಸಿ, ಅರಿಶಿನ, ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸುವಂತೆ ಮುಜರಾಯಿ ಇಲಾಖೆ ಸೂಚಿಸಿದೆ. ಜೊತೆಗೆ ಅಕ್ಕಿ, ಬೆಲ್ಲ, ಹಣ್ಣು ಮುಂತಾದ ಗೋಗ್ರಾಸವನ್ನು ನೀಡುವ ಮೂಲಕ ಸಂಜೆ ಗೋಪೂಜೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವಂತೆ ಸೂಚನೆ ನೀಡಲಾಗಿದೆ.
ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರ ಮೌಖಿಕ ಸೂಚನೆಯಂತೆ ಈ ಆದೇಶವನ್ನು ಮುಜರಾಯಿ ಇಲಾಖೆಯ ಆಯುಕ್ತರು ಜಾರಿಗೆ ತರುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಈ ಕ್ರಮವು ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋಮಾತೆಯ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಲಿದೆ.



