HomeInterviewಬಿಎಸ್‌ವೈ ಬೆಂಬಲಿಗನಿಗೆ ಮಣೆ; ನಿಜವಾಯ್ತು ವಿಜಯಸಾಕ್ಷಿ ವಿಶ್ಲೇಷಣೆ

ಬಿಎಸ್‌ವೈ ಬೆಂಬಲಿಗನಿಗೆ ಮಣೆ; ನಿಜವಾಯ್ತು ವಿಜಯಸಾಕ್ಷಿ ವಿಶ್ಲೇಷಣೆ

Spread the love

ಬಸವರಾಜ ಬೊಮ್ಮಾಯಿಗೆ ಒಲಿದ ಮುಖ್ಯಮಂತ್ರಿ ಪಟ್ಟ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಎರಡು ವರ್ಷಗಳ ಆಡಳಿತ ನಡೆಸಿ ಸಾಧನಾ ಪರ್ವ ಸಮಾವೇಶದಲ್ಲೇ ತಮ್ಮ ನಿರ್ಗಮನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಣ್ಣೀರಿಡುತ್ತಲೇ ಪ್ರಕಟಿಸಿದ ಮರುದಿನವೇ ಅವರ ಉತ್ತರಾಧಿಕಾರಿಯಾಗಿ, ಬಿಎಸ್‌ವೈ ಸಂಪುಟದಲ್ಲಿ ಗೃಹಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.

ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮುಖ್ಯಮಂತ್ರಿ ಹುದ್ದೆಯ ಕುತೂಹಲಕ್ಕೆ ಮಂಗಳವಾರ ಸಂಜೆಯೇ ತೆರೆಬಿದ್ದಿದೆ. ಮುಂದಿನ ಮುಖ್ಯಮಂತ್ರಿಯಾಗಿ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದೆ. ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಪರಮಾಪ್ತ ಬಳಗದವರು ಎನ್ನುವುದು ವಿಶೇಷ. ಹೀಗಾಗಿ, ಯಡಿಯೂರಪ್ಪ ಇಂಗಿತಕ್ಕೆ ಬಿಜೆಪಿ ಹೈಕಮಾಂಡ್ ಮನ್ನಣೆ ನೀಡಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಹೆಸರು ಪ್ರಸ್ತಾವವಾಯಿತು. ಯಡಿಯೂರಪ್ಪನವರ ಪ್ರಸ್ತಾಪವನ್ನು ಅನುಮೋದಿಸಿದ ಗೋವಿಂದ ಕಾರಜೋಳ ಅವರು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಒಮ್ಮತದಿಂದ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಕೇಂದ್ರದಿಂದ ಆಗಮಿಸಿದ್ದ ವೀಕ್ಷಕರಾದ ಧಮೇಂದ್ರ ಪ್ರಧಾನ್, ಕಿಶನ್ ಸಿಂಗ್, ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅರುಣ್ ಸಿಂಗ್, ಅರುಣಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರ ಸಮ್ಮುಖದಲ್ಲಿ ಹೊಸ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಯಿತು.

ನಿಜವಾಯ್ತು ವಿಜಯಸಾಕ್ಷಿ ವಿಶ್ಲೇಷಣೆ

ಜು. 18ರಂದು ವಿಜಯಸಾಕ್ಷಿ ಪ್ರಕಟಿಸಿದ ವಿಶೇಷ ವರದಿಯಲ್ಲಿ ಯಡಿಯೂರಪ್ಪ ಪದತ್ಯಾಗ ಖಚಿತವಾಗಿದೆ. ವರಿಷ್ಠರ ಜೊತೆಗಿನ ಮಾತುಕತೆಯಲ್ಲಿ ಯಡಿಯೂರಪ್ಪ ಪದತ್ಯಾಗಕ್ಕೆ ಸಿದ್ದರಾಗಿದ್ದು, ಆದರೆ, ಕೆಲವು ಷರತ್ತಗಳನ್ನು ವರಿಷ್ಠರ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಅದರಲ್ಲಿ ಪ್ರಮುಖ ಬೇಡಿಕೆ ತಾವು ಹೇಳಿದವರಿಗೆ ಸಿಎಂ ಸ್ಥಾನ ನೀಡಬೇಕು. ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಪಕ್ಷ ಅಥವಾ ಸರಕಾರದಲ್ಲಿ ಪ್ರಮುಖ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಯಡಿಯೂರಪ್ಪ ಅವರು ತಮ್ಮ‌ ನೆಚ್ಚಿನ ಶಿಷ್ಯ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಕಟ್ಟಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು. ನಮ್ಮ ವಿಶ್ಲೇಷಣೆ ಈಗ ನಿಜವಾಗಿದ್ದು, ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ಅಪ್ಪನ ಹಾದಿಯಲ್ಲಿ ಮಗ!

ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವುಗೊಂಡಿದ್ದ ಮುಖ್ಯಮಂತ್ರಿಯ ಸ್ಥಾನಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಶಾಸಕ, ಮಾಜಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಯ್ಕೆಯಾಗುವ ಮೂಲಕ ಹೋರಾಟದ ಹಾದಿಯಲ್ಲಿ ಹೂವು ಅರಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಹಾಗೂ ಚೆನ್ನಮ್ಮ ದಂಪತಿಯ ಪುತ್ರರಾಗಿ 1960ರ ಜನವರಿ 28ರಂದು ಜನಿಸಿದ ಬಸವರಾಜ ಬೊಮ್ಮಾಯಿ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಹುಬ್ಬಳ್ಳಿ ದೇಶಪಾಂಡೆ ನಗರದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯಿತು. ಪಿ.ಸಿ. ಜಾಬಿನ ವಿಜ್ಞಾನ ಕಾಲೇಜಿನಲ್ಲಿ ಓದು ಮುಂದುವರಿಸಿ, ಬಿ.ವಿ. ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯ ಎಂಜಿನಿಯರಿಂಗ್ ಪದವಿ ಪಡೆದರು. 1983ರಿಂದ ಪುಣೆಯ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷಗಳ ತಾಂತ್ರಿಕ ತರಬೇತಿ ಪಡೆದು, ಸ್ವಂತ ಕೈಗಾರಿಕೆ ಸ್ಥಾಪಿಸಿದರು. ವೈಜ್ಞಾನಿಕ ಮನೋಭಾವ ಹೊಂದಿರುವ ಬೊಮ್ಮಾಯಿ, ತಮ್ಮ ಕ್ಷೇತ್ರ ಹಾಗೂ ರಾಜ್ಯದಲ್ಲಿ ಹಲವು ನೀರಾವರಿ ಯೋಜನೆಗಳಿಂದ ಹೆಸರಾದವರು.

1995ರಲ್ಲಿ ಹುಬ್ಬಳ್ಳಿ ನಗರದ ಈದ್ಗಾ ಮೈದಾನದ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೂಲಕ ನಡೆಸಿದ ಪ್ರಯತ್ನದ ನೇತೃತ್ವ ವಹಿಸಿದ್ದರು. ಅದೇ ವರ್ಷ ರಾಜ್ಯ ಜನತಾದಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1996ರಿಂದ 1997ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

2007ರ ಜುಲೈನಲ್ಲಿ ಧಾರವಾಡದಿಂದ ನರಗುಂದವರೆಗೆ 21 ದಿನಗಳ ಕಾಲ 232 ಕಿ.ಮೀ. ದೂರ ರೈತರೊಂದಿಗೆ ಬೃಹತ್ ಪಾದಯಾತ್ರೆ ಕೈಗೊಂಡಿದ್ದರು. 1993ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ರಾಜ್ಯ ಯುವಜನತಾ ದಳದ ಐತಿಹಾಸಿಕ ಬೃಹತ್ ರ‌್ಯಾಲಿಯ ನೇತೃತ್ವ ವಹಿಸಿದ್ದರು. 1997 ಹಾಗೂ 2003ರಲ್ಲಿ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ- ಹಾವೇರಿ- ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ಆಯ್ಕೆಯಾದರು.

2008ರ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ಮತಕ್ಷೇತ್ರದಿಂದ ಆಯ್ಕೆಯಾದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಸಚಿವ ಸಂಪುಟದಲ್ಲಿ ಸತತ ಐದು ವರ್ಷಗಳವರೆಗೆ ಜಲ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದರು. 2013, 2018ರಲ್ಲೂ ಇದೇ ಕ್ಷೇತ್ರದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ದಾಖಲಿಸಿದರು. ಯಡಿಯೂರಪ್ಪನವರ ಸಂಪುಟದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಸರಳ ವ್ಯಕ್ತಿತ್ವ. ಭ್ರಷ್ಟಾಚಾರ ರಹಿತ ಆಡಳಿತದ ಇಮೇಜ್ ವರಿಷ್ಠರು ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಮೂವರು ಡಿಸಿಎಂಗಳು

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಮೂವರು ಉಪಮುಖ್ಯಮಂತ್ರಿಗಳನ್ನೂ ಆಯ್ಕೆ ಮಾಡಲಾಗಿದೆ. ಯಡಿಯೂರಪ್ಪ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಆಗಿ ಮುಂದುವರಿಸಿ, ದಲಿತ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ. ಜತೆಗೆ, ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಆರ್. ಅಶೋಕ್ ಹಾಗೂ ವಾಲ್ಮೀಕಿ ಸಮುದಾಯದ ಜನಪ್ರಿಯ ನಾಯಕ ಬಿ. ಶ್ರೀರಾಮುಲು ಅವರನ್ನು ಕೂಡ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದ್ದು, ಎಲ್ಲರೂ ಬುಧವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!