HomeGadag Newsಕಿತ್ತೂರು ಚೆನ್ನಮ್ಮ ಸ್ವಾಭಿಮಾನದ ಪ್ರತೀಕ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ಕಿತ್ತೂರು ಚೆನ್ನಮ್ಮ ಸ್ವಾಭಿಮಾನದ ಪ್ರತೀಕ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ವೀರರಾಣಿ ಕಿತ್ತೂರು ಚೆನ್ನಮ್ಮ ಸ್ವಾಭಿಮಾನದ ಪ್ರತೀಕ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರೊಂದಿಗೆ ಧೈರ್ಯ, ಶೌರ್ಯದಿಂದ ಹೋರಾಡಿದ ವೀರಮಾತೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಗುರುವಾರ ಜರುಗಿದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟೀಷರು ಪ್ರತಿ ವರ್ಷ ಬ್ರಿಟೀಷ್ ಸಾಮ್ರಾಜ್ಯಕ್ಕೆ ಇಂತಿಷ್ಟು ಕಪ್ಪ (ಕರ) ನೀಡಬೇಕೆಂದು ವಿವಿಧ ರಾಜರಿಗೆ ಕರಾರು ಹಾಕಿದರು. ಭಾರತದಲ್ಲಿಯ ರಾಜ್ಯಗಳ ರಾಜರಿಂದ ಬ್ರಿಟೀಷರು ಈ ರೀತಿ ಕಪ್ಪವನ್ನು ವಸೂಲು ಮಾಡುತ್ತಿದ್ದರು. ಆದರೆ ಕಿತ್ತೂರು ವೀರರಾಣಿ ಚೆನ್ನಮ್ಮ ಮಾತ್ರ ನಾವು ಕಪ್ಪ ಕೊಡುವುದಿಲ್ಲ ಎಂದು ಬ್ರಿಟೀಷರಿಗೆ ಎಚ್ಚರಿಕೆ ನೀಡಿದರು. ಕ್ರಿ.ಶ. 1824ರಲ್ಲಿ ಬ್ರಿಟೀಷರ ವಿರುದ್ಧ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ವೀರಾವೇಶದಿಂದ ಹೋರಾಡಿದ ದಿಟ್ಟ ಮಹಿಳೆ. ರಾಣಿ ಚೆನ್ನಮ್ಮಳ ಧೈರ್ಯ, ಸಾಹಸ ಎಲ್ಲರಿಗೂ ಮಾದರಿ ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ವೀರಮಾತೆ. ಭವ್ಯ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಪಸರಿಸಿದ ಕೀರ್ತಿ ವೀರರಾಣಿ ಚೆನ್ನಮ್ಮ ಅವರಿಗೆ ಸಲ್ಲುತ್ತದೆ ಎಂದರು.

ಗಣ್ಯರಾದ ವಿಜಯಕುಮಾರ ಗಡ್ಡಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸಂತಸದ ವಿಷಯ. ಕನ್ನಡ ನಾಡಿನ ಜನರು ಹೆಮ್ಮೆಪಡುವ ವಿಷಯವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮನವರು ಭಾರತದ ಪ್ರಪ್ರಥಮ ಮಹಿಳಾ ಹೋರಾಟಗಾರ್ತಿ. ಇವರ ಶೌರ್ಯ, ತ್ಯಾಗ ಎಲ್ಲ ಮಹಿಳೆಯರಿಗೂ ಪ್ರೇರಣೆಯಾಗಿವೆ ಎಂದರು.

ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸೋಮಶೇಖರ ಕೆರಿಮನಿ ಉಪನ್ಯಾಸ ನೀಡಿ, ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಹೋರಾಡಿದ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಮಹಿಳೆ ಚೆನ್ನಮ್ಮ. ಭವ್ಯ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯದ ಹೊಸ ಕಲ್ಪನೆ ನೀಡಿದ ಪುಣ್ಯಭೂಮಿಯೇ ಕಿತ್ತೂರು ಸಂಸ್ಥಾನ. ಸತ್ತರೆ ವೀರ ಸ್ವರ್ಗ, ಉಳಿದರೆ ಕಿತ್ತೂರು ನೆಲ ಎಂದ ರಾಣಿ ಚೆನ್ನಮ್ಮ ಬ್ರಿಟೀಷರಿಗೆ ನಡುಕ ಹುಟ್ಟಿಸಿದ್ದಲ್ಲದೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಮೂಡಿಸಿದರು ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಹಾಗೂ ಸಮಾಜ ಸೇವೆಯಲ್ಲಿ ತೊಡಗಿದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಜಾನಪದ ಅಕಾಡೆಮಿ ಸದಸ್ಯರಾದ ಶಂಕರಣ್ಣ ಸಂಕಣ್ಣವರ ಹಾಗೂ ಬಸವರಾಜ ಹಡಗಲಿ ತಂಡದವರು ವೀರರಾಣಿ ಕಿತ್ತೂರು ಚೆನ್ನಮ್ಮ ಕುರಿತು ಜನಪದ ಗೀತೆ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿ.ಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಅಧಿಕಾರಿಗಳಾದ ಶ್ರೀನಿವಾಸಮೂರ್ತಿ ಕುಲಕರ್ಣಿ, ಆರ್.ಎಸ್. ಬುರುಡಿ, ಡಾ. ಬಸವರಾಜ ಬಳ್ಳಾರಿ, ಗಣ್ಯರಾದ ಈರಣ್ಣ ಕರಿಭಿಷ್ಟಿ, ಎಫ್. ಮರಿಗೌಡ್ರ, ಶರಣಪ್ಪ ಗುಡಿಮನಿ, ಬಸಣ್ಣಪ್ಪ ಚಿಂಚಲಿ, ಅಯ್ಯಪ್ಪ ಅಂಗಡಿ, ಅಜ್ಜಣ್ಣ ಹಿರೇಮನಿ ಪಾಟೀಲ, ಶಿವು ಕವಲೂರು, ಮಹಾಬಲೇಶ ಶೆಟ್ಟರ, ರವಿ ಪಾಟೀಲ, ಮುರುಗೇಶ ಹಡಗಲಿ, ಎಸ್.ಎಸ್. ಹುಡಕಡ್ಲಿ, ಪ್ರಶಾಂತ ನರೇಗಲ್ಲ, ಪರಪ್ಪ ಕಮತರ, ಚಿನ್ನೂರ, ಚನ್ನವೀರಪ್ಪ ಮಳಗಿ, ಮಹೇಶ ಕರಿಭಿಷ್ಟಿ, ವಿರೂಪಾಕ್ಷಪ್ಪ ಮಟ್ಟಿ, ಸ್ವಾತಿ ಅಕ್ಕಿ, ಈರಮ್ಮ ತಾಳಿಕೋಟಿ, ಜಯಶ್ರೀ ಉಗಲಾಟದ, ಜಯಶ್ರೀ ಅಣ್ಣಿಗೇರಿ, ವೀರಣ್ಣ ಮಾಳವಾಡ, ಮರಿಗೌಡ್ರ, ಸಿ.ಕೆ. ಮಾಳಶೆಟ್ಟಿ, ರಾಜು ಬಗಾಡೆ ಸೇರಿದಂತೆ ಇತರರು ಇದ್ದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಶೌರ್ಯ, ಮಾನವೀಯ ಮೌಲ್ಯಗಳ ಕುರಿತು ಈಗಿನ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಮಕ್ಕಳಿಗೆ ಆತ್ಮಸ್ಥೈರ್ಯ ವೃದ್ಧಿಸಲು ಕರಾಟೆ, ಕುಸ್ತಿಗಳಂತಹ ಸ್ವಯಂ ರಕ್ಷಣಾ ಕಲೆಗಳನ್ನು ಕಲಿಸಬೇಕು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!