ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ನಿಟ್ಟುಸಿರು ಬಿಟ್ಟಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ನಟಿ ರಿಯಾ ಚಕ್ರವರ್ತಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿತ್ತು. ಇದೀಗ ಈ ಪ್ರಕರಣದಲ್ಲಿ ಸಿಬಿಐ ರಿಯಾ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಪಾಟ್ನಾದ ಕೋರ್ಟ್ಗೆ ಸಿಬಿಐ ಸಲ್ಲಿಸಿದ್ದ ಕ್ಲೋಸರ್ ರಿಪೋರ್ಟ್ನ ಅಂಶಗಳು ಬೆಳಕಿಗೆ ಬಂದಿವೆ. 6 ದಿನಗಳ ಮೊದಲೇ ರಿಯಾ ಅಪಾರ್ಟ್ಮೆಂಟ್ನಿಂದ ಹೊರಟಿದ್ದರು. ಹಣಕಾಸಿನ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ರಿಪೋರ್ಟ್ ನಲ್ಲಿ ಉಲ್ಲೇಖಿಸಿದೆ.
2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಸುಶಾಂತ್ ಸಿಂಗ್ ತಂದೆ ಕೆ.ಕೆ. ಸಿಂಗ್ ಅವರು ರಿಯಾ ಚಕ್ರವರ್ತಿ ಮೇಲೆ ಆರೋಪ ಹೊರಿಸಿದ್ದರು. ಇದೀಗ ಸಿಬಿಐ ರಿಯಾ ಚಕ್ರವರ್ತಿಗೆ ಕ್ಲೀನ್ಚಿಟ್ ನೀಡಿದೆ. ಆದರೆ ಸಿಬಿಐ ರಿಪೋರ್ಟ್ಗೆ ಸುಶಾಂತ್ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ರಜಪೂತ್ ಜೊತೆ ನಟಿ ರಿಯಾ ಚಕ್ರವರ್ತಿ ಲಿವ್-ಇನ್-ರಿಲೇಷನ್ಶಿಪ್ನಲ್ಲಿ ಇದ್ದರು. ಇಬ್ಬರ ಆಪ್ತವಾದ ಫೋಟೋಗಳು ವೈರಲ್ ಆಗಿದ್ದವು. ಆದರೆ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ರಿಯಾ ಚಕ್ರವರ್ತಿ ಮೇಲೆ ಅನುಮಾನ ಮೂಡಿತ್ತು. ಸುಶಾಂತ್ ಆತ್ಮಹತ್ಯೆಗೆ ರಿಯಾ ಚಕ್ರವರ್ತಿಯೇ ಪ್ರಚೋದನೆ ನೀಡಿದ್ದಾರೆ ಎಂದು ನಟನ ತಂದೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಿಯಾ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿತ್ತು.
ಸುಶಾಂತ್ ಅವರ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಹಣವನ್ನು ರಿಯಾ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೂಡ ಎದುರಾಗಿತ್ತು. ಡ್ರಗ್ಸ್ ಪೂರೈಕೆ, ಅಕ್ರಮ ಹಣ ಸಾಗಾಣಿಕೆ ಸೇರಿದಂತೆ ಹಲವು ಆಯಾಮದಿಂದಲೂ ತನಿಖೆ ನಡೆಸಲಾಗಿತ್ತು. ಈಗ ಸಿಬಿಐ ತನಿಖೆ ಪೂರ್ಣಗೊಂಡಿದ್ದು, ಸುಶಾಂತ್ ಸಾವಿನಲ್ಲಿ ರಿಯಾ ಕೈವಾಡ ಇಲ್ಲ ಎಂದು ಗೊತ್ತಾಗಿದ್ದು ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.



