‘ಥಮ’, ‘ಸ್ತ್ರೀ 2’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಜೋಡಿ ಸಚಿನ್ ಸಂಘ್ವಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಸಚಿನ್ ಅವರನ್ನು ಪೊಲೀಸರು ಬಂಧಿಸಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಯುವತಿಯೊಬ್ಬರು ಸಚಿನ್ ಸಂಘ್ವಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಸಚಿನ್ ಸಂಘ್ವಿ, ಸಂಗೀತ ಕ್ಷೇತ್ರದಲ್ಲಿ ಅವಕಾಶ ನೀಡುವುದಾಗಿ ಜೊತೆಗೆ ಪ್ರತ್ಯೇಕ ಮ್ಯೂಸಿಕ್ ಆಲ್ಬಮ್ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2024 ರಲ್ಲಿ ಸಚಿನ್, ಯುವತಿಯನ್ನು ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಮಾಡಿದ್ದರಂತೆ. ಹೊಸ ಮ್ಯೂಸಿಕ್ ಆಲ್ಬಮ್ನಲ್ಲಿ ಅವಕಾಶ ನೀಡುವುದಾಗಿ ಸಚಿನ್ ಹೇಳಿದ್ದರಂತೆ. ಆ ಬಳಿಕ ಇಬ್ಬರು ಪರಿಚಿತರಾಗಿದ್ದಾರೆ. ಬಳಿಕ ಸಚಿನ್ ಯುವತಿಯನ್ನು ತನ್ನ ಸ್ಟುಡಿಯೋಗೆ ಕರೆಸಿಕೊಂಡು, ಅಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಸಚಿನ್, ತಮ್ಮನ್ನು ಮದುವೆ ಆಗುವುದಾಗಿ ಹೇಳಿ, ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ವಂಚನೆ ಮಾಡಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾರೆ.
ಸಚಿನ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿನ್ ಪರ ವಕೀಲರು, ‘ನನ್ನ ಕಕ್ಷಿದಾರರ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಪ್ರಕರಣಕ್ಕೆ ವಿಚಾರಣೆಗೆ ಒಳಪಡುವ ಅರ್ಹತೆ ಇಲ್ಲ. ನನ್ನ ಕಕ್ಷಿದಾರರನ್ನು ಪೊಲೀಸರು ಬಂಧಿಸಿದ್ದು ಕಾನೂನುಬಾಹಿರವಾಗಿತ್ತು ಮತ್ತು ಅದಕ್ಕಾಗಿಯೇ ಅವರನ್ನು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು’ ಎಂದಿದ್ದಾರೆ.


