ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಸಂಚಾಲಕಿ ಬಿ.ಕೆ. ಸವಿತಕ್ಕ ದೀಪಾವಳಿ ಸಂದೇಶವನ್ನು ನೀಡಿದರು.
ದೀಪಾವಳಿ ದೀಪಗಳ ಹಬ್ಬವಾಗಿದೆ. ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ನೀಡುವ ಹಬ್ಬವೇ ದೀಪಾವಳಿಯಾಗಿದೆ. ದೀಪಾವಳಿಯನ್ನು ಹಬ್ಬಗಳ ಮಹಾರಾಜ ಎಂದೇ ಕರೆಯುತ್ತಾರೆ. ಹೀಗಾಗಿ ಈ ಹಬ್ಬವನ್ನು ಯಾವುದಾದರೊಂದು ಪ್ರಾಂತ, ಸ್ಥಳದಲ್ಲಿ ಆಚರಿಸದೆ ದೇಶ-ವಿದೇಶಗಳಲ್ಲಿಯೂ ಆಚರಿಸುವುದನ್ನು ಕಾಣುತ್ತೇವೆ. ಅಂದರೆ ಜ್ಞಾನದ ಬೆಳಕು ಎಲ್ಲರಿಗೂ ಬೇಕು ಎಂಬುದೇ ಇದರ ಅರ್ಥವಾಗಿದೆ ಎಂದು ಹೇಳಿದರು.
ದೀಪಗಳ ಸಾಲನ್ನೇ ಹೊತ್ತು ತರುವ ಹಬ್ಬ ದೀಪಾವಳಿಯಾಗಿದೆ. ಇದು ಪ್ರತಿಯೊಬ್ಬ ಮಾನವನ ಸಂಸ್ಕಾರದಲ್ಲಿ ಆತ್ಮಿಕ ಪ್ರೇಮ, ಶಾಂತಿ, ಸಹನೆ, ಸೌಹಾರ್ದತೆ, ಏಕತೆ, ಸಹನಶೀಲತೆ, ಪವಿತ್ರತೆ, ಪ್ರಾಮಾಣಿಕತೆ, ಸತ್ಯತೆ ಎನ್ನುವ ಅನೇಕ ದಿವ್ಯ ಗುಣಗಳ ದೀಪವು ನಿತ್ಯವೂ ಪ್ರಜ್ವಲಿಸುತ್ತಿದ್ದರೆ ಅದೇ ಸತ್ಯದ ದೀಪಾವಳಿ. ನಿಮ್ಮ ಜೀವನದಲ್ಲಿ ನಿತ್ಯವೂ ದೀಪಾವಳಿಯಾಗಬೇಕಿದ್ದರೆ ನೀವು ಶಿವನನ್ನು ನಿರಂತರ ಧ್ಯಾನ ಮಾಡುತ್ತ, ಅವಗುಣಗಳ ಕಸವನ್ನು ತೆಗೆಯುತ್ತ, ಸದ್ಗುಣಗಳ ಸಂಗ್ರಹಣೆ ಮಾಡುತ್ತ ಸಂಸ್ಕಾರ ನಿರ್ಮಾಣ ಮಾಡುತ್ತಿದ್ದರೆ ಅದೇ ನಿತ್ಯ ದೀಪಾವಳಿಯಾಗುತ್ತದೆ. ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಬಿ.ಕೆ. ಸವಿತಕ್ಕ ಹೇಳಿದರು.
ಈ ಸಂದರ್ಭದಲ್ಲಿ ಅನ್ನಪೂರ್ಣ ಅಣಗೌಡ್ರ, ವಿದ್ಯಾ ಹೆಗಡೆ, ಅಕ್ಕಮಹಾದೇವಿ ಹಿರೇಮಠ, ರತ್ನಾ ಬಾಣದ, ಶಿವಲಿಂಗಪ್ಪ ತಿಪ್ಪಶೆಟ್ಟಿ, ಶಾರದಾ ಬೇವಿನಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.



