ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ/ಶಿಗ್ಲಿ: ಸ್ವತಂತ್ರ ಭಾರತದ ಬೆಳ್ಳಿಚುಕ್ಕಿ ಕಿತ್ತೂರ ಚೆನ್ನಮ್ಮ ಕನ್ನಡ ನಾಡಿನ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕಾಗಿ ಜೀವನವನ್ನೇ ಸಮರ್ಪಿಸಿಕೊಂಡ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾಳೆ ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಶಿಗ್ಲಿ ಗ್ರಾಮದಲ್ಲಿ ವೀರರಾಣಿ ಚೆನ್ನಮ್ಮಾಜಿಯ ವಿಜಯೋತ್ಸವ ಮತ್ತು ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯದ ಕ್ರಾಂತಿ ಕಹಳೆ ಮೊಳಗಿಸಿದ ಸ್ವತಂತ್ರ ಭಾರತದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರ ಚೆನ್ನಮ್ಮ ಕನ್ನಡ ನಾಡಿನ ಹೆಮ್ಮೆ. ಚೆನ್ನಮ್ಮಳ ದೇಶಪ್ರೇಮ, ಶೌರ್ಯ, ಸಾಹಸ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಚೆನ್ನಮ್ಮಳಂತಹ ವೀರ ಮಹನೀಯರ ಚರಿತೆಯನ್ನು ಮನದಟ್ಟು ಮಾಡಬೇಕು. ಚೆನ್ನಮ್ಮಳಂತಹ ವೀರ ಮಹಿಳೆಯಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನ, ಗೌರವ ಸಿಗುವಂತಾಗಿದೆ. ಚೆನ್ನಮ್ಮಾಜಿ ಯಾವುದೇ ಒಂದು ಸಮಾಜಕ್ಕೆ ಸೀಮಿತವಾದವರಲ್ಲ, ಕೇವಲ ಜಯಂತಿ, ವಿಜಯೋತ್ಸವಗಳಿಗೆ ಚೆನ್ನಮ್ಮನ ಸ್ಮರಣೆ ಸೀಮಿತವಾಗದೇ ವರ್ಷದುದ್ದಕ್ಕೂ ಇಂತವರ ಸ್ಪೂರ್ತಿದಾಯಕ ಸ್ಮರಣೆಯ ಕಾರ್ಯಕ್ರಮಗಳು ಜರುಗಬೇಕು ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚಮಸಾಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಸೋಮಣ್ಣ ಡಾಣಗಲ್ ಪ್ರಾಸ್ತಾವಿಕ ನುಡಿದರು. ನಿವೃತ್ತ ಲೋಕಾಯುಕ್ತ ಎಸ್‌ಪಿ ಶಂಕರ ಎಂ.ರಾಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ರಾಜ್ಯ ಉಪಾಧ್ಯಕ್ಷ ಎಫ್.ಸಿ. ಮರಿಗೌಡ್ರ, ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಟಿ, ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಆರ್.ಎಂ. ಹೊನಕೇರಿ, ಗ್ರಾ.ಪಂ ಅಧ್ಯಕ್ಷೆ ಸಂಗೀತಾ ಪೂಜಾರ, ಸಿದ್ದಣ್ಣ ಯಲಿಗಾರ, ನಿಂಗಪ್ಪ ಹುನಗುಂದ, ಹೆಚ್.ಎಫ್. ತಳವಾರ, ಹೆಚ್.ಎಫ್. ಗುಡೂರ, ಅಶೋಕ ಶಿರಹಟ್ಟಿ, ಡಿ.ವೈ. ಹುನಗುಂದ, ಬಸಣ್ಣ ಹಂಜಿ, ರಾಮಣ್ಣ ಲಮಾಣಿ, ಡಾ. ಬಿ.ವಿ. ಮೇಲ್ಮುರಿ, ಅಜ್ಜಪ್ಪ ಕರ್ಜಕಣ್ಣವರ, ಮುದಕಣ್ಣ ಗಡಾದ, ಚನ್ನಪ್ಪ ಹುನಗುಂದ, ಪ್ರವೀಣ ಕಾಳಪ್ಪನವರ, ಮಂಜುನಾಥ ಇಚ್ಚಂಗಿ ಮುಂತಾದವರಿದ್ದರು.
ಈರಣ್ಣ ಅಕ್ಕೂರ, ಎನ್.ಕೆ. ಹತ್ತಿಕಾಳ, ಬಿ.ಬಿ. ಬಳಿಗಾರ ನಿರ್ವಹಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.
ಅಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ಸೋಮಶೇಖರ ಕೆರಿಮಣಿ ಉಪನ್ಯಾಸ ನೀಡಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಕೀರ್ತಿ ವೀರರಾಣಿ ಕಿತ್ತೂರ ಚೆನ್ನಮ್ಮಳಿಗೆ ಸಲ್ಲುತ್ತದೆ. 1824ರಲ್ಲಿನ ಬ್ರಿಟೀಷರ ವಿರುದ್ಧದ ಹೋರಾಟ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿಯಾಗಿದ್ದು, ಚೆನ್ನಮ್ಮ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.


