ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ತಾಲೂಕಿನ ರಾಗಿಮಸಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ತುಂಬೀಗೆರೆ ಗ್ರಾಮದ ಎಸ್.ಟಿ. ಸೌಭಾಗ್ಯಮ್ಮ (35) ಡೆಂಗ್ಯೂ ಜ್ವರದಿಂದ ಶುಕ್ರವಾರ ತಡರಾತ್ರಿ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಮೃತ ಮಹಿಳೆ ಕಳೆದೆರಡು ದಿನಗಳಿಂದ ಉಸಿರಾಟದ ತೊಂದರೆ ಹಾಗೂ ವೈರಸ್ ಸೋಂಕಿನ ಜ್ವರದಿಂದ ಬಳಲುತ್ತಿದ್ದರಿಂದ ದಾವಣಗೆರೆ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ದಲಿತ ಕಾಲೋನಿಯ ಸೌಭಾಗ್ಯಮ್ಮ ಅವರ ಮನೆಯ ಮುಂದಿನ ರಸ್ತೆಯನ್ನು ಕಳೆದ 15 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ನಂತರದ ದಿನಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿ ದಲಿತ ಕಾಲೋನಿಯ ಮನೆಯ ಮುಂದುಗಡೆಯೇ ಕಲುಷಿತ ನೀರು ಶೇಖರಣೆಯಾಗುತ್ತಿತ್ತು. ನಿರಂತರವಾಗಿ ಸುರಿದ ಮಳೆಯಿಂದ ಸೊಳ್ಳೆಗಳ ಉತ್ಪತ್ತಿಯಾಗಿ ಡೆಂಗ್ಯೂ ಜ್ವರ ಹರಡತೊಡಗಿತ್ತು. ಕಳೆದ 15 ದಿನಗಳ ಹಿಂದೆಯಷ್ಟೇ ಡೆಂಗ್ಯೂವಿನಿಂದ ಓರ್ವ ವ್ಯಕ್ತಿ ಈ ಕಾಲೋನಿಯಲ್ಲಿ ಸಾವನ್ನಪ್ಪಿದ್ದರು.
ರಸ್ತೆ ದುರಸ್ತಿ ಮಾಡಿಸಲು ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮನೆಯ ಮುಂದುಗಡೆಯೇ ಮಳೆಯ ನೀರು ಶೇಖರಣೆಯಾಗಿ, ದಿನನಿತ್ಯ ಅದರ ವಾಸನೆ ಸೇವಿಸುತ್ತಾ ನಾವು ಊಟ ಮಾಡಬೇಕಾದ ಅನಿವಾರ್ಯತೆ ಇದೆ. ಮಳೆಗಾಲ ಬಂತೆಯಾದರೆ ಸೊಳ್ಳೆಗಳ ಉಪಟಳ ಹೇಳತೀರದಾಗಿದೆ ಎಂದು ಕಾಲೋನಿಯ ನಿವಾಸಿ ಕೃಷ್ಣ ಅಳಲು ತೋಡಿಕೊಂಡರು.
ಭೋವಿ ಕಾಲೋನಿಯ ಮನೆಯ ಸುತ್ತ ಕಲುಷಿತ ವಾತಾವರಣವಿದೆ. ಅತಿಯಾದ ಮಳೆಯಿಂದ ಸೊಳ್ಳೆಗಳ ಉತ್ಪತ್ತಿಯಾಗಿ ಡೆಂಗ್ಯೂ ಜ್ವರ ಬಾಧಿಸಿರುವ ಸಾಧ್ಯತೆಯಿದೆ. ಕೋವಿಡ್ ಶೀಟ್ ವರದಿಗಾಗಿ ಅರ್ಜಿ ಸಲ್ಲಿಸಿದ್ದೇವೆ, ಎರಡು ದಿನಗಳ ನಂತರ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಟಿಹೆಚ್‌ಓ ಡಾ. ಪೃಥ್ವಿ ತಿಳಿಸಿದರು.
ನಮ್ಮ ಭೋವಿ ಕಾಲೋನಿ ಹೊರತುಪಡಿಸಿ, ಗ್ರಾಮದ ಉಳಿದೆಲ್ಲ ರಸ್ತೆಗಳು ಸ್ವಚ್ಛವಾಗಿವೆ. ರಸ್ತೆ ದುರಸ್ತಿ ಮತ್ತು ಚರಂಡಿ ನಿರ್ಮಾಣವಿಲ್ಲದ ಕಾರಣ ನಿತ್ಯ ಬಳಕೆಯ ನೀರನ್ನು ನಮ್ಮ ಕಾಲೋನಿ ಜನರು ಮನೆಯಂಗಳದಲ್ಲಿಯೇ ಚೆಲ್ಲಬೇಕಾಗಿದೆ. ಮಳೆಗಾಲದಲ್ಲಿ ನೀರು ಕಾಲೋನಿಯ ತುಂಬ ಒಂದೇ ಕಡೆ ಶೇಖರಣೆಯಾಗುತ್ತದೆ. ಹಾಗಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ನಾವು ಪ್ರತಿ ವರ್ಷ ಸಾಂಕ್ರಾಮಿಕ ರೋಗದಿಂದ ಪರಿತಪಿಸಿ, ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳುವುದು ಅನಿವಾರ್ಯವಾಗಿದೆ. ಶಾಸಕರಿಗೆ ರಸ್ತೆ ನಿರ್ಮಿಸಲು ಹಲವು ಬಾರಿ ಮನವಿ ನೀಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲವೆಂದು ಕಾಲೋನಿಯ ನಿವಾಸಿ ಭೋವಿ ಮಂಜುನಾಥ ತಿಳಿಸಿದರು.


