ಬೆಂಗಳೂರು:– ಜೈಲಿನಲ್ಲಿ ಕೈದಿಗೆ 20 ಸಾವಿರ ರೂ.ಗೆ ಮೊಬೈಲ್ ಮಾರಾಟ ಮಾಡಲು ಹೋಗಿ ಜೈಲು ಸಿಬ್ಬಂದಿಯೇ ಸಿಕ್ಕಿಬಿದ್ದ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜರುಗಿದೆ.
ಅಮರ್ ಪ್ರಾಂಜೆ (29) ಬಂಧಿತ ಜೈಲು ವೀಕ್ಷಕ. ಮೊಬೈಲ್ ಮಾರಾಟ ಮಾಡುತ್ತಿದ್ದಾಗಲೇ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದಿಂದ ಕಾರಾಗೃಹದಲ್ಲಿ ಅಕ್ರಮಗಳಿಗೆ ಜೈಲು ಸಿಬ್ಬಂದಿಗಳೇ ಸಾಥ್ ನೀಡ್ತಿದ್ದಾರೆ ಅನ್ನೋದು ಮತ್ತೊಮ್ಮೆ ಬಟಾಬಯಲಾಗಿದೆ.
ಅಮರ್ ಇದೇ ಅಕ್ಟೋಬರ್ 23ರಂದು ಕರ್ತವ್ಯಕ್ಕೆ ಆಗಮಿಸಿದ್ದ. ಈ ವೇಳೆ ಪ್ರವೇಶದ್ವಾರದಲ್ಲಿ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ತಪಾಸಣೆಗೆ ಒಳಪಡಿಸಲು ಮುಂದಾಗಿದ್ರು. ಆದ್ರೆ ಅಮೆರ್ ತಪಾಸಣೆಗೆ ನಿರಾಕರಿಸಿ ವಾಪಸ್ ಹೋಗಲು ಮುಂದಾದರು. ಇದರಿಂದ ಅನುಮಾನಗೊಂಡ ಸಿಬ್ಬಂದಿ ಅವರನ್ನ ಹಿಡಿದು ತಪಾಸಣೆ ನಡೆಸಿದಾಗ ಒಳುಡುಪಿನಲ್ಲಿ ಒಂದು ಸ್ಮಾರ್ಟ್‌ಫೋನ್, ಇಯರ್ ಫೋನ್ ಪತ್ತೆಯಾಗಿದೆ.
ತಕ್ಷಣ ಜೈಲಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಮರ್ ಪ್ರಾಂಜೆಯನ್ನ ಬಂಧಿಸಿದ್ದಾರೆ. ಮೊಬೈಲ್ ಸಮೇತ ಪೊಲೀಸರು ಬಂಧಿಸಿದ್ದಾರೆ. ಜೈಲು ಅಧೀಕ್ಷಕ ಹೆಚ್.ಎ ಪರಮೇಶ್ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮರ್ ವಿಚಾರಣೆ ವೇಳೆ ಜೈಲಿನಲ್ಲಿರುವ ಕೊಲೆ ಪ್ರಕರಣದ ಕೈದಿಯೊಬ್ಬರಿಂದ 20 ಸಾವಿರ ರೂ.ಗಳನ್ನ ಪಡೆದು ಹೊರಗಡೆಯಿಂದ ಮೊಬೈಲ್ ತಂದು ಕೊಡಲು ಮುಂದಾಗಿದ್ದೆ. ಅದರಂತೆ 10 ಸಾವಿರ ರೂ. ಮುಂಗಡ ಹಣ ಪಡೆದು ಮೊಬೈಲ್ ತಂದು ಒಳಗಡೆ ತಲುಪಿಸಲು ಪ್ರಯತ್ನಿಸಿದ್ದೆ ಎಂದು ಆರೋಪಿ ಅಮರ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.


