ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೂಜ್ಯ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭವನ್ನು ಖ್ಯಾತ ವಕೀಲರಾದ ರವಿಕಾಂತ ಅಂಗಡಿ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೂಜ್ಯ ಶ್ರೀಗಳವರು ಬಸವಾದಿ ಶರಣರ ಆದರ್ಶಗಳನ್ನು, ವಿಚಾರಗಳನ್ನು ಮೈಗೂಡಿಸಿಕೊಂಡು ತಮ್ಮ ನೇರ ನುಡಿಯಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದುತ್ತಾ ಮನಸ್ಸನ್ನು ಮತ್ತು ಸಮಾಜವನ್ನು ಕಟ್ಟುವಂತಹ ಮಹತ್ತರ ಕಾರ್ಯ ಮಾಡಿದರು. ಕರ್ನಾಟಕದ ಏಕೀಕರಣ ಹಾಗೂ ಗೋಕಾಕ ಚಳುವಳಿಯ ಮಂಚೂಣಿಯಲ್ಲಿ ನಿಂತು ಕನ್ನಡ ಭಾಷೆ, ನೆಲ, ಜಲಗಳ ರಕ್ಷಣೆ ಮಾಡಿದರು. 600ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಜನರ ಬೌದ್ಧಿಕ ವಿಕಾಸದಲ್ಲಿ ವೈಚಾರಿಕತೆಯನ್ನು ಬೆಳೆಸಿದರು. ಶಿಕ್ಷಣ ಪ್ರೇಮಿಗಳಾದ ಪೂಜ್ಯ ಶ್ರೀಗಳು ನಾಡಿನ ಎಲ್ಲಾ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಅನೇಕ ಬಡ ಮತ್ತು ಹಿಂದುಳಿದ ಜನಾಂಗದವರಿಗೆ ಶಿಕ್ಷಣ ಸಿಗುವಂತೆ ಮಾಡಿದರು ಎಂದರು.
ವೇದಿಕೆಯ ಮೇಲೆ ಅತಿಥಿಗಳಾಗಿ ಉಪಸ್ಥಿತರಿದ್ದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಅಮರೇಶ ಅಂಗಡಿ, ಸಿದ್ಧಲಿಂಗಯ್ಯ ಹಿರೇಮಠ, ವಿದ್ಯಾಧರ ದೊಡ್ಡಮನಿ ಮಾತನಾಡಿ, ಪೂಜ್ಯ ಶ್ರೀಗಳ ಮಾತೃತ್ವ ಗುಣ, ಸಾಮಾಜಿಕ ಕಳಕಳಿಯ ಬದ್ಧತೆ ಹಾಗೂ ಮಾನವೀಯ ಮೌಲ್ಯಗಳನ್ನು ಯುವಜನಾಂಗವು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶೇಖಣ್ಣ ಕಳಸಾಪೂರಶೆಟ್ಟರ ಮಾತನಾಡಿ, ಪೂಜ್ಯ ಶ್ರೀಗಳ ನಡೆ, ನುಡಿ, ಸಿದ್ಧಾಂತ ಒಂದೇ ಇತ್ತು. ಪೂಜ್ಯರು ಎಲ್ಲರ ಬಗ್ಗೆ ಅಂತಃಕರಣ, ಮಾನವೀಯತೆ ಹಾಗೂ ಸಮಾನತೆಯ ಮನೋಭಾವನೆ ಹೊಂದಿದ್ದರು ಎಂದು ಶ್ರೀಗಳ ಆದರ್ಶಗಳನ್ನು ಸ್ಮರಿಸಿದರು.
ಮಂಜುಶ್ರೀ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾ. ಎಂ.ಎಂ ಬುರಡಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಶ್ವೇತಾ ಸಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಪ್ಪತ್ತಗುಡ್ಡವನ್ನು ರಕ್ಷಣೆ ಮಾಡಿ ಪರಿಸರ ಕಾಳಜಿ ತೋರಿದರು. ಕೃಷಿ ಬಗ್ಗೆ ಮತ್ತು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪೂಜ್ಯರು ಸ್ವತಃ ತಾವೇ ಕೃಷಿ ಮಾಡಿ ರೈತರಿಗೆ ಮಾದರಿಯಾದರು. ಪೂಜ್ಯ ಶ್ರೀಗಳು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಮಾತೃ ಹೃದಯಿಯಾಗಿದ್ದರು. ಅವರ ಆದರ್ಶಗಳನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸುತ್ತಾ ಉತ್ತಮ ವ್ಯಕ್ತಿಗಳಾಗಬೇಕೆಂದು ರವಿಕಾಂತ ಅಂಗಡಿ ಹೇಳಿದರು.



