ಚಿಕ್ಕಮಗಳೂರು:- ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಅತಿಥಿ ಶಿಕ್ಷಕಿಯ ಮೇಲೆ ಭೀಕರ ದೌರ್ಜನ್ಯ ನಡೆದ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಬಸರೀಕಟ್ಟೆ ಗ್ರಾಮದ ಪ್ರಾಥಮಿಕ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಪ್ರತಿದಿನ ಕೊಗ್ರೆ ಗ್ರಾಮದಿಂದ ಬಸರೀಕಟ್ಟೆ ಗ್ರಾಮಕ್ಕೆ ಓಡಾಡುತ್ತಿದ್ದರು. ಮಂಗಳವಾರ (ಅಕ್ಟೋಬರ್ 28) ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ, ನಾಲ್ಕು-ಐದು ಮಂದಿ ಯುವಕರ ಗುಂಪು ದಾರಿಯಲ್ಲಿ ಕಾಯುತ್ತಾ ನಿಂತಿದ್ದರು. ಶಿಕ್ಷಕಿ ಹಾದುಹೋಗುತ್ತಿದ್ದಂತೆಯೇ, ಆ ಯುವಕರು ಆಕೆಯ ಮೇಲೆ ದಾಳಿ ನಡೆಸಿದ್ದಾರೆ.
ಅವರು ಶಿಕ್ಷಕಿಯನ್ನು ಬಲವಂತವಾಗಿ ಹಿಡಿದು ಅಡಿಕೆ ಮರಕ್ಕೆ ಕಟ್ಟಿ, ಬಟ್ಟೆ ಕಳಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಶಿಕ್ಷಕಿ ಕಿರುಚಿದಾಗ ಅವರ ಬಾಯಿಗೆ ಮಣ್ಣು ಹಾಕಿ ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಆಕೆಯ ಕಿರುಚಾಟ ಸ್ಥಳೀಯರ ಕಿವಿಗೆ ಬಿದ್ದಿದೆ. ಜನರು ಸ್ಥಳಕ್ಕೆ ಓಡಿಬಂದಾಗ ಆರೋಪಿಗಳು ಶಿಕ್ಷಕಿಯ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಪರಾರಿಯಾಗಿದ್ದಾರೆ. ಶಿಕ್ಷಕಿಯ ತಲೆಗೆ ಗಂಭೀರ ಗಾಯವಾಗಿದ್ದು, ರಕ್ತಸ್ರಾವದಿಂದ ತತ್ತರಿಸಿದ್ದರು.
ಆಕೆಯನ್ನು ತಕ್ಷಣ ಕೊಪ್ಪ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಘಟನೆ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಈ ಪ್ರಕರಣದಲ್ಲಿ ಬಾಳೆಹೊನ್ನೂರು ಮೂಲದ ಭವಿತ್ (24) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ತನಿಖೆಯ ಪ್ರಾಥಮಿಕ ಮಾಹಿತಿ ಪ್ರಕಾರ, ಸಂತ್ರಸ್ತೆ ಈ ಯುವಕನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಪ್ರತೀಕಾರವಾಗಿ ಈ ದೌರ್ಜನ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.



