ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ಆಟೋ ಗಾಳಿಗೆ ಮೇಲಕ್ಕೆ ಹಾರಿ ದೂರ ಬಿದ್ದಿದೆ.
ಮದ್ದೂರಿನ ಚಾಮನಹಳ್ಳಿ ಬಳಿ ತಡರಾತ್ರಿ ನಡೆದ ಈ ಅಪಘಾತದಲ್ಲಿ ಗೂಡ್ಸ್ ಆಟೋ ಚಾಲಕ ರಾಜು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಘಾತದ ಭೀಕರತೆ ಎಲ್ಲರನ್ನು ಬೆಚ್ಚಿಬೀಳಿಸಿದೆ.
ಕಾರು ವೇಗವಾಗಿ ಬಂದ ಪರಿಣಾಮ ಆಟೋಗೆ ಬಲವಾದ ಡಿಕ್ಕಿ ಹೊಡೆದಿದ್ದು, ಅದೇ ವೇಳೆ ಆಟೋ ಚಾಲಕನೊಂದಿಗೆ ಮಾತನಾಡುತ್ತಿದ್ದ ಬೈಕ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



