ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ರಸ್ತೆಯಲ್ಲಿನ ವೀರಶೈವ ಸ್ಮಶಾನ ಭೂಮಿಯನ್ನು ಶಾಸಕ ಡಾ. ಚಂದ್ರು ಲಮಾಣಿ ಅವರು ಸ್ವಂತ ಖರ್ಚಿನಿಂದ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಗಿಡಗಂಟಿ, ತ್ಯಾಜ್ಯದಿಂದ ತುಂಬಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾದ ಹಿಂದೂ ಸ್ಮಶಾನ ಭೂಮಿಯ ಒಳಹೋಗಲೂ ಪರದಾಡುವ ಪರಿಸ್ಥಿತಿಯಿದೆ. ಈ ಬಗ್ಗೆ ಪುರಸಭೆಗೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಹಿಂದೂ ಸಮಾಜದ ಕೆಲ ಮುಖಂಡರು ಶಾಸಕರ ಗಮನಕ್ಕೆ ತಂದಿದ್ದರು. ಪರಿಶೀಲಿಸಿದ ಶಾಸಕರು ಸ್ಮಶಾನದಲ್ಲಿ ಬೆಳೆದ ಗಿಡಗಂಟಿ, ಮುಳ್ಳು ಇತರ ತ್ಯಾಜ್ಯವನ್ನು ನಾಲ್ಕೇ ದಿನ ಜೆಸಿಬಿಯ ಮೂಲಕ ಸ್ವಚ್ಛ ಮಾಡಿಸಿದ್ದಾರೆ. ಸ್ಮಶಾನಕ್ಕೆ ಹೋಗಲು ತಾತ್ಕಾಲಿಕ ರಸ್ತೆ, ಚರಂಡಿ ನಿರ್ಮಿಸಿಕೊಟ್ಟಿದ್ದಾರಲ್ಲದೆ, ಕೆಟ್ಟು ನಿಂತಿರುವ ಬೋರ್‌ವೆಲ್, ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಪುರಸಭೆಗೆ ಸೂಚಿಸಿದ್ದಾರೆ.
ಶಾಸಕರ ಕಾರ್ಯಕ್ಕೆ ಸಾರ್ವಜನಿಕರಾದ ಭರಮಪ್ಪ ಕೊಡ್ಲಿ, ಬಂಗಾರಪ್ಪ ಮುಳಗುಂದ, ಚನ್ನಪ್ಪ ಚಿಂಚಲಿ, ನೀಲಪ್ಪ ಕನವಳ್ಳಿ, ಈರಣ್ಣ ಮುಳಗುಂದ, ಬಸವರಾಜ ಮೆಣಸಿನಕಾಯಿ, ರಾಮಣ್ಣ ಗೌರಿ, ಈರಪ್ಪ ಗುಡಗೇರಿ, ರಮೇಶ ಹೆಬ್ಬಾಳ, ಮಂಜಪ್ಪ ಮುಳಗುಂದ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


