ವಿಜಯಸಾಕ್ಷಿ ಸುದ್ದಿ, ಗದಗ
ಖರೀದಿಸಿದ ಜಮೀನು ನೋಂದಣಿ ಮಾಡಲು ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ (ಚವಡಿ ಕೂಟ) ಕಂದಾಯ ಇಲಾಖೆಯ ಕಛೇರಿ ಮೇಲೆ ಎಸಿಬಿ ಅಧಿಕಾರಿಗಳು ಶನಿವಾರ ಸಂಜೆ ದಾಳಿ ಮಾಡಿದ್ದಾರೆ. ಹಣ ಪಡೆದ ಆರೋಪದಲ್ಲಿ ಮಧ್ಯವರ್ತಿ ದಾವಲ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ದಾಳಿಯ ವಿಷಯ ತಿಳಿದ ರೆವಿನ್ಯೂ ಇನ್ಸ್‌ಪೆಕ್ಟರ್ ಎಸ್ ಎಸ್ ಪಾಟೀಲ್ ಪರಾರಿ ಆಗಿದ್ದಾರೆ.
ಗದಗ ತಾಲೂಕಿನ ಅಂತೂರು ಬೆಂತೂರ ಗ್ರಾಮದ ಗುರಯ್ಯ ಲಗ್ಮಯ್ಯನವರ ಎಂಬುವವರು ಜಮೀನು ಖರೀದಿ ಮಾಡಿದ್ದರು. ಅದನ್ನು ಇವರ ಹೆಸರಲ್ಲಿ ನೋಂದಣಿ ಮಾಡಲು ಎಂಟು ಸಾವಿರ ಲಂಚ ಕೇಳಿದ ಆರೋಪ ರೆವಿನ್ಯೂ ಇನ್ಸ್‌ಪೆಕ್ಟರ್ ಎಸ್ ಎಸ್ ಪಾಟೀಲ್ ಅವರ ಮೇಲಿದೆ.
ಇವತ್ತು ಗುರಯ್ಯ ಎಂಬ ರೈತ ಹಣ ಕೊಡಲು ಬಂದಾಗ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ಸಂಪರ್ಕಿಸಿದಾಗ ಮಧ್ಯವರ್ತಿ ದಾವಲ ಕೈಯಲ್ಲಿ ಕೊಡಲು ಹೇಳಲಾಗಿತ್ತು ಎಂದು ತಿಳಿದು ಬಂದಿದೆ. ನಂತರ ರೈತ ಎಂಟು ಸಾವಿರ ಹಣವನ್ನು ಮಧ್ಯವರ್ತಿ ದಾವಲ ಎಂಬಾತನ ಕೈಯಲ್ಲಿ ಕೊಟ್ಟಿದ್ದಾರೆ.
ಆಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಮಧ್ಯವರ್ತಿ ದಾವಲನನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ವಿಷಯ ಕಂದಾಯ ಇಲಾಖೆಯಲ್ಲಿ ಇದ್ದ ಸಿಬ್ಬಂದಿ ಎಸ್ ಎಸ್ ಪಾಟೀಲ್ ರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಇದರಿಂದ ರೆವಿನ್ಯೂ ಇನ್ಸ್‌ಪೆಕ್ಟರ್ ಎಸ್ ಎಸ್ ಪಾಟೀಲ್ ಕಚೇರಿಯತ್ತ ಸುಳಿಯದೇ ಅಲ್ಲಿಂದಲೇ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಸಿಬಿ ಎಸ್ಪಿ ನೇಮಗೌಡ, ಡಿವೈಎಸ್ಪಿ ಸುರೇಶ್ ರೆಡ್ಡಿ, ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೀರೇಶ್ ಹಳ್ಳಿ, ಸಿಬ್ಬಂದಿಗಳಾದ ನಾರಾಯಣಗೌಡ್ ತಾಯಣ್ಣವರ್, ಎಮ್ ಎಮ್ ಅಯ್ಯನಗೌಡ್ರ, ಆರ್ ಎಸ್ ಹೆಬಸೂರ, ವೀರೇಶ್ ಜೋಳದ, ಶರೀಫ್ ಮುಲ್ಲಾ, ಮಂಜು ಮುಳಗುಂದ, ಐ ಸಿ ಜಾಲಿಹಾಳ, ಹಾಗೂ ಬಿಸಿನಳ್ಳಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.