ಬೆಂಗಳೂರು: ಧರ್ಮಸ್ಥಳ ತಲೆಬುರುಡೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಈ ಪ್ರಕರಣದಲ್ಲಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಹಾಗೂ ವಿಠಲ್ ಗೌಡ ಅವರಿಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯ FIR ನಂ. 39/2025 ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ಪೀಠ, ಪರ-ವಿರೋಧ ವಾದ ಆಲಿಸಿ, ತನಿಖೆಗೆ ನವೆಂಬರ್ 12ರವರೆಗೆ ತಡೆ ನೀಡಿದೆ.
ಅರ್ಜಿದಾರರ ಪರ ವಕೀಲ ಬಾಲನ್ ವಾದ ಮಂಡಿಸಿದ್ದು, ಈಗಾಗಲೇ 9 ಬಾರಿ ನೋಟಿಸ್ ನೀಡಲಾಗಿದೆ. ಎಫ್ಐಆರ್ನಲ್ಲಿ ಅರ್ಜಿದಾರರನ್ನು ಆರೋಪಿಗಳೆಂದು ಎಲ್ಲಿಯೂ ಉಲ್ಲೇಖಿಸಿಲ್ಲವೆಂದು ಅವರು ತಿಳಿಸಿದ್ದಾರೆ. ಖುದ್ದಾಗಿ ನೋಟಿಸ್ ನೀಡದೇ ವಾಟ್ಸ್ಯಾಪ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗಿದೆ ಎಂಬುದು ಅವರ ಆಕ್ಷೇಪ. ಜೊತೆಗೆ BNSS ಸೆಕ್ಷನ್ 35(3) ಅಡಿಯಲ್ಲಿ ನೀಡಿರುವ ಸಮನ್ಸ್ ಕಾನೂನುಬಾಹಿರ ಎಂದು ವಾದ ಮಂಡಿಸಲಾಯಿತು. ರಾಜಕೀಯ ಹಾಗೂ ಧಾರ್ಮಿಕ ವೈರತ್ವದಿಂದಲೇ ವಿಚಾರಣೆ ನಡೆಸಲಾಗುತ್ತಿದೆ ಎಂದು ವಕೀಲರು ಹೇಳಿದ್ದಾರೆ.
ಇನ್ನೊಂದು ಕಡೆ, ಎಸ್ಐಟಿ ಪರ ವಾದ ಮಂಡಿಸಿದ ಬಿ.ಎನ್. ಜಗದೀಶ್ ಅವರು, ಅರ್ಜಿದಾರರ ಪ್ರಚೋದನೆ ಮೇರೆಗೆ ಚಿನ್ನಯ್ಯ ದೂರು ನೀಡಿದ್ದಾನೆ ಮತ್ತು 164 ಹೇಳಿಕೆಯಲ್ಲಿ ಸ್ಪಷ್ಟವಾಗಿ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ 20 ಕಡೆ ಅಗೆದು ತನಿಖೆ ನಡೆದಿದ್ದು, ಆಧಾರಗಳ ಮೇರೆಗೆ ನೋಟಿಸ್ ನೀಡಲಾಗಿದೆ ಎಂದು ಕೋರ್ಟ್ಗೆ ವಿವರಿಸಿದರು. ಈ ವೇಳೆ ಹೈಕೋರ್ಟ್ ಅಧಿಕಾರಿಗಳು ಇಷ್ಟೊಂದು ನೋಟಿಸ್ ನೀಡಿರುವುದು ಯಾಕೆ ಎಂಬುದನ್ನು ಪ್ರಶ್ನಿಸಿದರು. ಕೊನೆಗೆ ಕೋರ್ಟ್ ತನಿಖೆಗೆ ನವೆಂಬರ್ 12ರವರೆಗೆ ತಾತ್ಕಾಲಿಕ ತಡೆ ನೀಡಿದೆ.



