ವಿಜಯಸಾಕ್ಷಿ ಸುದ್ದಿ, ಡಂಬಳ: ದೇಶದಲ್ಲಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಕನ್ನಡ ಭಾಷೆಯನ್ನು ಎಲ್ಲರೂ ಉಳಿಸಿ-ಬೆಳೆಸುವ ಜತೆಗೆ, ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಬಂದಾಗ ಎಲ್ಲರೂ ಹೋರಾಡಬೇಕಿದೆ ಎಂದು ರಹಮಾನ ನಮಾಜಿ ಹೇಳಿದರು.
ಡಂಬಳ ಗ್ರಾಮದ ಬಸವೇಶ್ವರ ವೃತ್ತದ ಬಳಿ ಶ್ರೀ ಬಸವೇಶ್ವರ ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಮೇಶ ಬಚನಳ್ಳಿ, ಕಾಳಿಂಗ ಒಂಟಲಭೋವಿ ಮಾತನಾಡಿ, ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಕನ್ನಡದ ಏಕೀಕರಣಕ್ಕಾಗಿ ಸಾಕಷ್ಟು ಸಾಹಿತಿಗಳು ಹೋರಾಟ ಮಾಡಿದ್ದಾರೆ. ಅವರನ್ನು ಸ್ಮರಣೆ ಮಾಡುವದರೊಂದಿಗೆ ಅವರ ಹೋರಾಟ ನಮಗೆ ದಾರಿದೀಪವಾಗಬೇಕಿದೆ ಎಂದು ಹೇಳಿದರು.
ಮುತ್ತು ಕರವೀರಮಠ, ಮಹಬೂಬ ಅತ್ತಾರ ಮಾತನಾಡಿ, ಕನ್ನಡ ಭಾಷೆಯನ್ನು ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ. ಕನ್ನಡದ ಮೇರು ಕೃತಿಗಳನ್ನು ಹೆಚ್ಚು ಓದಬೇಕು. ಕನ್ನಡ ಪದಗಳನ್ನು ಹೆಚ್ಚು ಬಳಸಿದಾಗ ಭಾಷೆ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರಾದ ವಿನಾಯಕ ಕಾಡಸಿದ್ದೇಶ್ವರಮಠ, ರಂಗಪ್ಪ ಒಂಟಲಭೋವಿ, ಚೇತನ ಕಾಡಸಿದ್ದೇಶ್ವರಮಠ, ಬಾಬುಸಾಬ ದೌಲತ್ತದಾರ, ನಾಶೀರ ಅತ್ತಾರ ಮುಂತಾದವರಿದ್ದರು.


