ಮೈಸೂರು:- ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಿಣಿ ಮಾಡಿದ ಸುಳ್ಳು ಆರೋಪಕ್ಕೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಜರುಗಿದೆ.
ಪಿರಿಯಾಪಟ್ಟಣ ತಾಲೂಕಿನ ಕುಡಕೂರು ನಿವಾಸಿ ರಾಮು (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಗರ್ಭಿಣಿ ಆಗುವುದಕ್ಕೆ ಆಕೆಯ ಶಾಲೆಯ ದೈಹಿಕ ಶಿಕ್ಷಕ ಕಾರಣ. ಆದರೂ ನನ್ನ ಮೇಲೆ ಆರೋಪ ಹೊರಿಸಿದ್ದಾರೆ ಎಂದು ಯುವಕ ವಾಟ್ಸಪ್ ವಾಯ್ಸ್ ನೋಟ್ ಕಳುಹಿಸಿದ್ದಾನೆ. ವಿದ್ಯಾರ್ಥಿನಿ ಜೊತೆ ಸಲುಗೆಯಿಂದ ಮಾತಾಡಿದ್ದಕ್ಕೆ ತನ್ನ ಮೇಲೆ ಆರೋಪ ಬಂದಿದೆ ಎಂದು ಮನನೊಂದ ಯುವಕ ವಾಯ್ಸ್ ನೋಟ್ ಹಾಕಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಶಾಲೆಗೆ ಕಳಂಕ ಬರುತ್ತೆ ಅಂತಾ ಕೇಸ್ ಮುಚ್ಚಿ ಹಾಕ್ತಿದ್ದಾರೆ. ಹುಡುಗಿ ಮಾತನಾಡಿಸಿದ್ದಕ್ಕೆ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ದೂರಿದ್ದಾನೆ. ಪಿರಿಯಾಪಟ್ಟಣ ತಾಲೂಕಿನ ಶಾಲೆಯೊಂದರಲ್ಲಿ ನಡೆದಿರುವ ಘಟನೆ ಇದ್ದಾಗಿದ್ದು, ಅ.31 ರಂದು ವಾಯ್ಸ್ ನೋಟ್ ಹಾಕಿ ಯುವಕ ನಾಪತ್ತೆಯಾಗಿದ್ದ. ಇದೀಗ ಬೆಟ್ಟದ ತುಂಗಾ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪೋಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಕೈಗೊಂಡಿದ್ದಾರೆ.


