ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರೀ ಚಿದಂಬರ ಮಹಾಸ್ವಾಮಿಯ 267ನೇ ಜನ್ಮ ದಿನೋತ್ಸವದ ನಿಮಿತ್ತ ಅಖಿಲ ಕರ್ನಾಟಕ ಚತುರ್ವೇದ ವಿದ್ಯಾರ್ಥಿ ಸಮ್ಮೇಳನ, ಲಕ್ಷ ಗಣಪತಿ ಅಥರ್ವಶೀರ್ಷ ಪಾರಾಯಣವನ್ನು ಸೂಡಿ ಗ್ರಾಮದ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಮುಖ್ಯ ಅರ್ಚಕ ವೇ. ಬ್ರ. ಭುಜಂಗಶರ್ಮಾ ಜೋಷಿ ತಿಳಿಸಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಮ್ಮೇಳನದಲ್ಲಿ ಚತುರ್ವೇದ ಪಾಠ ಕಲಿಯುತ್ತಿರುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 50ಕ್ಕೂ ಹೆಚ್ಚು ವಿದ್ವಾಂಸರು ಕನ್ನಡ ನಾಡಿನ ವಿವಿಧ ಭಾಗಗಳಿಂದ ಬಂದು ಪಾಲ್ಗೊಳ್ಳುತ್ತಾರೆ. ನ. 6ರಿಂದ 11ರವರೆಗೆ ನಿತ್ಯವೂ ಕಾಕಡಾರುತಿ, ಅಭಿಷೇಕ, ಅಲಂಕಾರ, ಪಾಲಕೀ ಸೇವೆ, ಭಜನೆ, ಆರತಿ, ಅಷ್ಟಾವಧಾನಗಳು ನಡೆಯುತ್ತವೆ. ನ. 6ರ ಬೆಳಿಗ್ಗೆ 7.30ಕ್ಕೆ ಧರ್ಮ ಧ್ವಜಾರೋಹಣ, 10ಕ್ಕೆ ಛಾತ್ರ ಸಮ್ಮೇಳನಕ್ಕೆ ಆಗಮಿಸುವ 200ಕ್ಕೂ ಹೆಚ್ಚು ಬ್ರಹ್ಮಚಾರಿಗಳಿಂದ ಲಕ್ಷ ಗಣಪತಿ ಅಥರ್ವಶೀರ್ಷ ಪಾರಾಯಣವು ಹೊಸಪೇಟೆಯ ವಿದ್ವಾನ್ ಪಾರ್ಥಸಾರಥಿ ಶರ್ಮಾ ಜೋಷಿಯವರ ನೇತೃತ್ವದಲ್ಲಿ ಪ್ರಾರಂಭವಾಗುತ್ತದೆ.
ನ. 8ರಂದು ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಎಸ್. ರಘುನಾಥ ಉದ್ಘಾಟಿಸಲಿದ್ದು, ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾನ್ ಸುಜಯ ಶಾನಭಾಗ ನೃತ್ಯರೂಪಕವನ್ನು ಪ್ರದರ್ಶಿಸಲಿದ್ದಾರೆ.
ನ. 9ರಂದು ಬೆಳಿಗ್ಗೆ 11ಕ್ಕೆ ಬ್ರಹ್ಮಚಾರಿ ಪೂಜೆ, 11.30ಕ್ಕೆ ಶ್ರೀ ಚಿದಂಬರ ಪಂಚಾಂಗ ಬಿಡುಗಡೆ ಜರುಗಲಿದ್ದು, ಮುರಗೋಡದ ದಿವಾಕರ ದೀಕ್ಷಿತರು ದಿವ್ಯ ಸಾನ್ನಿಧ್ಯ ವಹಿಸುತ್ತಾರೆ. ಕೂಡಲಗಿಯ ಶ್ರೀ ಗಜಾನನಬಾಬಾ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದು, ಕಮಡೊಳ್ಳಿಯ ಶಂಕರಭಟ್ಟ ಜೋಷಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೊಸಪೇಟಿಯ ಪಾರ್ಥಸಾರಥಿ ಶರ್ಮಾ ಜೋಷಿಯವರಿಗೆ ಶ್ರೀ ವಿರೂಪಾಕ್ಷ ಶಾಸ್ತ್ರಿ ಪುರಸ್ಕಾರ ನೀಡಲಾಗುತ್ತಿದೆ. ಮ. 3ಕ್ಕೆ ಶ್ರೀ ಚಿದಂಬರ ಮಹಾಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
ಸಂಜೆ 6ಕ್ಕೆ ಶ್ರೀರಾಮ ಕಾಸರ ಅವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ನಡೆಯಲಿದ್ದು, ಅನೇಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನ. 10ರಂದು ಬೆಳಿಗ್ಗೆ 10ಕ್ಕೆ ಶ್ರೀ ಚಿದಂಬರ ಜನ್ಮ ಆಖ್ಯಾನ ನಡೆಯಲಿದ್ದು, ವೇ. ಮೂ. ದಿಗಂಬರ ಶಾಸ್ತ್ರಿಗಳು ಕುರ್ತಕೋಟಿ ಆಖ್ಯಾನ ನೀಡಲಿದ್ದಾರೆ. ನಂತರ ತೊಟ್ಟಿಲೋತ್ಸವ ನೆರವೇರಲಿದೆ ಎಂದು ತಿಳಿಸಿದರು.
ಶ್ರೀ ದತ್ತ ಭಕ್ತ ಮಂಡಳಿ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಸೇರಿದಂತೆ ಅನೇಕ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ನ. 10ರಂದು ಸಮ್ಮೇಳನದ ಸಮಾರೋಪ ಮತ್ತು ರಥೋತ್ಸವ ಜರುಗಲಿದ್ದು, ಕೂಡಲಿ ಶೃಂಗೇರಿ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಅಗಡಿ-ಆನಂದವನದ ಶ್ರೀ ಗುರುದತ್ತಮೂರ್ತಿ ಚಕ್ರವರ್ತಿಗಳು ಸಾನ್ನಿಧ್ಯ ವಹಿಸಲಿದ್ದು, ಬೆಂಗಳೂರಿನ ಗಿರೀಶ ಶರ್ಮಾ ನೇತೃತ್ವ, ಚಿದಂಬರಭಟ್ಟ ಜೋಷಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಜಿ.ಎಸ್. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ನರೇಗಲ್ಲದ ಡಾ. ಜಿ.ಕೆ. ಕಾಳೆಯವರಿಗೆ ಪುರಸ್ಕಾರ ಪ್ರದಾನ ಜರುಗಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ವೇ. ಬ್ರ. ಭುಜಂಗಶರ್ಮಾ ಜೋಷಿ ತಿಳಿಸಿದರು.


