ಕನ್ನಡ ಚಲನಚಿತ್ರರಂಗದ ಎವರಿಗ್ರೀನ್ ನಟ ಡಾ. ವಿಷ್ಣುವರ್ಧನ್ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ ‘ಯಜಮಾನ’ ಬಿಡುಗಡೆಯಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಚಿತ್ರವನ್ನು ಮರುಬಿಡುಗಡೆ ಮಾಡಲಾಗುತ್ತಿದೆ.
2000ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದರು. ರಾಜ್ಯದಾದ್ಯಂತ ಅದ್ಭುತ ಯಶಸ್ಸು ಗಳಿಸಿದ್ದ ಈ ಚಿತ್ರವನ್ನು, ನವೆಂಬರ್ 7 ರಂದು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರ ಮರುಬಿಡುಗಡೆ ಮಾಡುತ್ತಿರುವ ಮುನಿಸ್ವಾಮಿ ಎಸ್.ಡಿ. ತಿಳಿಸಿದ್ದಾರೆ.
ಆಧುನಿಕ ತಂತ್ರಜ್ಞಾನ ಬಳಸಿ ಚಿತ್ರದ ಆಡಿಯೋ ಮತ್ತು ವೀಡಿಯೋ ಗುಣಮಟ್ಟವನ್ನು ಸುಧಾರಿಸಲಾಗಿದೆ. ಮೊನೋ ಟ್ರ್ಯಾಕ್‌ನಲ್ಲಿ ದಾಖಲಾಗಿದ್ದ ಧ್ವನಿಯನ್ನು 5.1 ಮತ್ತು 7.1 ಡಿಜಿಟಲ್ ಸೌಂಡ್‌ಗೆ ಪರಿವರ್ತಿಸಲಾಗಿದೆ. ಹಾಡುಗಳಿಗೂ ನವೀನ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಡಿಐ ಪ್ರಕ್ರಿಯೆಯ ಮೂಲಕ ಚಿತ್ರವನ್ನು 4K ಡಿಜಿಟಲ್ ಪ್ರೊಜೆಕ್ಷನ್‌ಗೆ ತಯಾರಿಸಲಾಗಿದೆ.
“ಚಿತ್ರದ ಧ್ವನಿ, ದೃಶ್ಯ ಮತ್ತು ಸಂಗೀತ ಗುಣಮಟ್ಟವನ್ನು ಹೊಸ ತಲೆಮಾರಿಗೆ ತಕ್ಕಂತೆ ನವೀಕರಿಸಲಾಗಿದೆ. ಮುನಿಸ್ವಾಮಿ ಅವರು ಯಾವುದೇ ತೊಂದರೆ ಬಾರದಂತೆ ಸಂಪೂರ್ಣ ಶ್ರಮಿಸಿದ್ದಾರೆ” ಎಂದು ಚಿತ್ರದ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಹೇಳಿದ್ದಾರೆ.
“ಈ ಚಿತ್ರ ಯಶಸ್ವಿಯಾಗಲು ವಿಷ್ಣುವರ್ಧನ್ ಮತ್ತು ಕೆ.ವಿ. ನಾಗೇಶ್ ಕುಮಾರ್ ಪ್ರಮುಖ ಕಾರಣ. 130 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶತದಿನೋತ್ಸವ, 40 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ವಾರ, ನಾಲ್ಕು ಕಡೆಗಳಲ್ಲಿ ಒಂದು ವರ್ಷ ಚಿತ್ರ ಓಡಿತ್ತು. 25 ವರ್ಷಗಳ ಹಿಂದೆ 35 ಕೋಟಿ ಗಳಿಕೆ ದಾಖಲಿಸಿದ ಚಿತ್ರವಿದು” ಎಂದು ನಿರ್ಮಾಪಕ ರೆಹಮಾನ್ ತಿಳಿಸಿದ್ದಾರೆ.
“ಡಾ. ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ, ಅವರ ಸ್ಮರಣಾರ್ಥವಾಗಿ ಈ ಚಿತ್ರವನ್ನು ಆಧುನಿಕ ತಂತ್ರಜ್ಞಾನದಲ್ಲಿ ಮರುಬಿಡುಗಡೆ ಮಾಡುತ್ತಿದ್ದೇನೆ. ಎಲ್ಲ ಅಭಿಮಾನಿಗಳೂ ಚಿತ್ರಮಂದಿರದಲ್ಲೇ ವೀಕ್ಷಿಸಬೇಕು” ಎಂದು ಮುನಿಸ್ವಾಮಿ ಅವರು ಮನವಿ ಮಾಡಿದರು.
25 ವರ್ಷಗಳ ಹಿಂದೆ ‘ಯಜಮಾನ’ ಚಿತ್ರ ಬಿಡುಗಡೆ ವೇಳೆ ಹಳ್ಳಿಗಳಿಂದ ಟ್ರ್ಯಾಕ್ಟರ್‌ಗಳಲ್ಲಿ ಜನರು ನಗರಗಳಿಗೆ ಬಂದು ಸಿನಿಮಾ ವೀಕ್ಷಿಸಿದ ಸಂದರ್ಭಗಳು ಇನ್ನೂ ನೆನಪಾಗುತ್ತಿವೆ. ಈಗ ಮತ್ತೆ ‘ಯಜಮಾನ’ ಅದೇ ಮಾಯೆಯನ್ನು ಪುನರಾವರ್ತನೆ ಮಾಡಬಹುದೇ ಎನ್ನುವುದು ಅಭಿಮಾನಿಗಳ ಕಾದು ನೋಡುವ ವಿಷಯವಾಗಿದೆ.


