ಮೈಸೂರು:- ಮೈಸೂರಿನಲ್ಲಿ ಎರಡು ಹೊಸ ಫ್ಲೈಓವರ್‌ಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ X ಮಾಡಿರುವ ಅವರು, ಜೆಎಲ್‌ಬಿ ರಸ್ತೆ ಹಾಗೂ ವಿನೋಬಾ ರಸ್ತೆಗಳು ಮೈಸೂರಿನ ಪಾರಂಪರಿಕತೆ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಪ್ರಮುಖ ರಸ್ತೆಗಳಾಗಿವೆ. ಈ ಮಾರ್ಗಗಳಲ್ಲಿ ಜನಾಭಿಪ್ರಾಯವಿಲ್ಲದೆ ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಿರುವುದು ತಪ್ಪು ಎಂದು ಹೇಳಿದ್ದಾರೆ. “ಡಿಪಿಆರ್ ಸಿದ್ಧಪಡಿಸುತ್ತಿದ್ದಾರೆ, ಆದರೆ ನಾವು ಇದಕ್ಕೆ ಸ್ಪಷ್ಟ ವಿರೋಧಿಯಾಗಿದ್ದೇವೆ,” ಎಂದು ಅವರು ಹೇಳಿದ್ದಾರೆ.
ವಿನೋಬಾ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣ ಮಾಡಿದರೆ ಅನೇಕ ಮರಗಳ ಹಾನಿ ಸಂಭವಿಸುವ ಸಾಧ್ಯತೆ ಇದೆ. “ಅಭಿವೃದ್ಧಿಯ ನೆಪದಲ್ಲಿ ಮೈಸೂರಿನ ಸೌಂದರ್ಯ ಹಾಳು ಮಾಡಬಾರದು. ಪಾರಂಪರಿಕ ನಗರಿಯ ಗುರುತು ಉಳಿಸಬೇಕು,” ಎಂದು ಒಡೆಯರ್ ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಗ್ರೇಟರ್ ಮೈಸೂರು ಸಭೆಯಲ್ಲಿ ನಗರಿಯ ಪಾರಂಪರಿಕತೆ ಕಾಪಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿರುವುದನ್ನು ಅವರು ನೆನಪಿಸಿದರು.
“ಫ್ಲೈಓವರ್ ನಿರ್ಮಾಣವೇ ಶಾಶ್ವತ ಪರಿಹಾರವಲ್ಲ. ಮೈಸೂರಿನ ಜನಸಂಖ್ಯೆ ಹಾಗೂ ಸಂಚಾರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಮಾದರಿಯಲ್ಲಿ ಅಂಡರ್‌ಗ್ರೌಂಡ್ ಮೆಟ್ರೋ ನಿರ್ಮಾಣ ಮಾಡಬಹುದು. ನಮಗೆ ಮೆಟ್ರೋ ವಿರೋಧವಿಲ್ಲ,” ಎಂದಿರುವ ಯದುವೀರ ಒಡೆಯರ್, ಜನಾಭಿಪ್ರಾಯವನ್ನು ಲೆಕ್ಕಿಸದೇ ಕಾಮಗಾರಿ ಕೈಗೆತ್ತಿಕೊಂಡರೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.
ಅವರು ಮುಂದುವರಿಸಿ, “ಗ್ರೇಟರ್ ಮೈಸೂರಿನಿಂದ ಒಳಿತಾಗಬಹುದು, ಆದರೆ ಅವೈಜ್ಞಾನಿಕವಾಗಿ, ಪೂರ್ವ ತಯಾರಿಯಿಲ್ಲದೆ ಕಾಮಗಾರಿ ಕೈಗೆತ್ತಿಕೊಳ್ಳಬಾರದು. ಬೆಂಗಳೂರು ಮಾದರಿಯ ತಪ್ಪುಗಳನ್ನು ಮೈಸೂರಿನಲ್ಲಿ ಪುನರಾವರ್ತಿಸಬಾರದು,” ಎಂದು ಸ್ಪಷ್ಟಪಡಿಸಿದ್ದಾರೆ.



