ಬೆಳಗಾವಿ: ಜಿಲ್ಲೆಯ ಕಬ್ಬಿನ ದರ ನಿಗದಿ ಹೋರಾಟ ಮತ್ತೊಂದು ತೀವ್ರ ಹಂತಕ್ಕೆ ತಲುಪಿದೆ.
ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಸಹ, ರಾಜ್ಯ ಸರ್ಕಾರ ಹಿರಿಯ ಸಚಿವ ಹೆಚ್.ಕೆ. ಪಾಟೀಲ್ರನ್ನು ಸಂಧಾನಕ್ಕಾಗಿ ಕಳುಹಿಸಿತ್ತು. ಆದರೆ ರೈತರು ಸರ್ಕಾರದ ಮನವಿಗೆ ಸೊಪ್ಪು ಹಾಕದೇ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.
ಎಂಟನೇ ದಿನಕ್ಕೂ ಹೋರಾಟ ಮುಂದುವರಿಕೆ:-
ಕಬ್ಬಿನ ದರ ನಿಗದಿಗಾಗಿ ರೈತರು ಕಳೆದ ಎಂಟು ದಿನಗಳಿಂದ ಗುರ್ಲಾಪುರ ಕ್ರಾಸ್ ಬಳಿ ಹೋರಾಟ ನಡೆಸುತ್ತಿದ್ದಾರೆ. ಹಲವು ಸಂಘಟನೆಗಳು ಈಗಾಗಲೇ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರತಿಭಟನಾ ವೇದಿಕೆಗೆ ಭೇಟಿ ನೀಡಿದ ನಂತರ ಹೋರಾಟ ಮತ್ತಷ್ಟು ಉಗ್ರಗತಿಯಲ್ಲಿ ಸಾಗುತ್ತಿದೆ.
ಸಚಿವ ಹೆಚ್.ಕೆ. ಪಾಟೀಲ್ ಸಂಧಾನ ವಿಫಲ:-
ಹಿರಿಯ ಸಚಿವ ಹೆಚ್.ಕೆ. ಪಾಟೀಲ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಎರಡು ದಿನ ಸಮಯಾವಕಾಶ ನೀಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರೂ ರೈತರು ಅಸಮಾಧಾನಗೊಂಡರು.
“ನಾವು ಬೆಂಗಳೂರಿಗೆ ಬರುವುದಿಲ್ಲ, ನೀವು ಸಿಎಂ ಮತ್ತು ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡಿ ಬೆಲೆ ಘೋಷಣೆ ಮಾಡಿ” ಎಂದು ರೈತರು ಪಟ್ಟು ಹಿಡಿದರು. ಸಂಧಾನ ವಿಫಲವಾದ ಬಳಿಕ ರೈತರು ಸಚಿವರ ಕಾರಿಗೆ ಅಡ್ಡಲಾಗಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದಲ್ಲೂ ಹೋರಾಟದ ಕಿಚ್ಚು:-
ವಿಜಯಪುರ ನಗರದಲ್ಲಿಯೂ ಡಿಸಿ ಕಚೇರಿ ಎದುರು ರೈತರ ಹೋರಾಟ ಮುಂದುವರಿಯುತ್ತಿದ್ದು, ಸಚಿವ ಎಂ.ಬಿ. ಪಾಟೀಲ್ ಅವರು ರೈತರನ್ನು ಮನವೊಲಿಸಲು ಯತ್ನಿಸಿದರು. “ಸಿಎಂ ಸಿದ್ದರಾಮಯ್ಯ ಯಾವ ಸಕ್ಕರೆ ಕಾರ್ಖಾನೆ ಪರವಾಗಿಯೂ ಇಲ್ಲ, ಅವರು ರೈತರ ಪರವಾಗಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯ ಚರ್ಚೆ ಆಗಲಿದೆ” ಎಂದು ಭರವಸೆ ನೀಡಿದರು.
ಸಂಜೆವರೆಗೆ ಗಡುವು – ಪಂಜಾಬ್ ಮಾದರಿ ಎಚ್ಚರಿಕೆ:-
ಬೆಳಗಾವಿ ಹಾಗೂ ವಿಜಯಪುರದ ರೈತರು ಸರ್ಕಾರಕ್ಕೆ ಇಂದು ಸಂಜೆವರೆಗಿನ ಗಡುವು ನೀಡಿದ್ದಾರೆ. “ಸಂಜೆಯೊಳಗೆ ದರ ನಿಗದಿ ಘೋಷಣೆ ಆಗದಿದ್ದರೆ ಪಂಜಾಬ್ ಮಾದರಿಯ ಹೋರಾಟ ಆರಂಭಿಸುತ್ತೇವೆ” ಎಂದು ಎಚ್ಚರಿಸಿದ್ದಾರೆ. ರೈತರು “ಡಿಸಿ ಮತ್ತು ಎಸ್ಪಿಯವರ ಸಮ್ಮುಖದಲ್ಲಿ ಸಿಎಂ ನಿರ್ಧಾರ ಕೈಗೊಳ್ಳಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.


