ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ತಮ್ಮ ಜನ್ಮದಿನವನ್ನು ಜನರು ಹೇಗೆ ಹೇಗೋ ಆಚರಿಸುತ್ತಾರೆ. ಆದರೆ ನಮ್ಮ ಗ್ರಾಮ ಪಂಚಾಯಿತಿ ಸದಸ್ಯೆ, ಮಾಜಿ ಅಧ್ಯಕ್ಷೆ ರೇಖಾ ವೀರಾಪೂರ ಗ್ರಾಮದ ಡಿಜಿಟಲ್ ಗ್ರಂಥಾಲಯಕ್ಕೆ ಗಣಕ ಯಂತ್ರವನ್ನು ಕೊಡುಗೆಯಾಗಿ ನೀಡುವುದರ ಮೂಲಕ ತಮ್ಮ ಜನ್ಮದಿನಾಚರಣೆಯನ್ನು ಸಾರ್ಥಕಪಡಿಸಿಕೊಂಡಿದ್ದಾರೆ. ಹೀಗೆ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದು ಮುಖ್ಯ ಎಂದು ಅಬ್ಬಿಗೇರಿ ಗ್ರಾ.ಪಂ ಅಧ್ಯಕ್ಷೆ ಲಲಿತಾ ರಾಠೋಡ ಹೇಳಿದರು.
ಸದಸ್ಯೆ ರೇಖಾ ವೀರಾಪೂರ ಇವರು ತಮ್ಮ ಜನ್ಮದಿನದ ನಿಮಿತ್ತ ಗ್ರಾಮದ ಡಿಜಿಟಲ್ ಗ್ರಂಥಾಲಯಕ್ಕೆ ನೀಡಿದ ಗಣಕ ಯಂತ್ರವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಈ ದಾನದ ಮೂಲಕ ಗ್ರಾಮದ ಯುವಕರು ಮತ್ತು ವಿದ್ಯಾರ್ಥಿಗಳು ಡಿಜಿಟಲ್ ಜ್ಞಾನವನ್ನು ಪಡೆಯಲು ಅನುಕೂಲವಾಗುತ್ತದೆ. ಇಂತಹ ಉದಾರ ದೇಣಿಗೆಯನ್ನು ಅತ್ಯಂತ ಸಂತೋಷ ದಿಂದ ಸ್ವೀಕರಿಸಿದ್ದೇವೆ. ಇದು ಎಲ್ಲರಿಗೂ ಮಾದರಿ ಎಂದು ಅಧ್ಯಕ್ಷೆ ರಾಠೋಡ ತಿಳಿಸಿದರು.
ಈ ವೇಳೆ ಉಪಾಧ್ಯಕ್ಷೆ ಜ್ಯೋತಿ ತೆಗ್ಗಿನಕೇರಿ, ಸದಸ್ಯ ಹನುಮಂತಪ್ಪ ದ್ವಾಸಲ್, ಸಚಿನ್ ಪಾಟೀಲ, ದಾನಿ ರೇಖಾ ವೀರಾಪೂರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಹಿತ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.


