ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ವೀರರಾಣಿ ಕಿತ್ತೂರ ಚೆನ್ನಾಮ್ಮಾಜಿ ವಿಜಯೋತ್ಸವ ಹಾಗೂ ಜಯಂತ್ಯುತ್ಸವ ಕಾರ್ಯಕ್ರಮವನ್ನು ಗದಗದಲ್ಲಿ ನವೆಂಬರ್ 8ರಂದು ಆಯೋಜಿಸಲಾಗಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭಾಗವಹಿಸಲಿದ್ದಾರೆ ಎಂದು ವಿಜಯೋತ್ಸವ ಸಮಿತಿ ಅಧ್ಯಕ್ಷ ಎಮ್.ಎಸ್. ಕರಿಗೌಡ್ರ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 8ರಂದು ಬೆಳಿಗ್ಗೆ 11 ಗಂಟೆಗೆ ಚೆನ್ನಮ್ಮ ವೃತ್ತದಿಂದ ಮೆರವಣಿಗೆ ಆರಂಭವಾಗಿ ಮುಳಗುಂದ ನಾಕಾ, ಕೆಐಬಿ, ಒಕ್ಕಲಗೇರಿ ಓಣಿ, ಪಂಚರಹೊAಡ, ಹತ್ತಿಕಾಳಕೂಟದವರೆಗೂ ನಡೆಯಲಿದೆ. ವಿಜಯೋತ್ಸವದ ಸಮಾರಂಭಕ್ಕೆ ಜಿಲ್ಲೆಯ ಸಮಾಜದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈಗಾಗಲೇ ಸಮಿತಿಯ ಪದಾಧಿಕಾರಿಗಳ ತಂಡ ಕಾರ್ಯಕ್ರಮದ ಯಶಸ್ವಿಗಾಗಿ ಪ್ರತಿ ಗ್ರಾಮಕ್ಕೆ ತೆರಳಿ ಸಮಾಜದ ಮುಖಂಡರಿಗೆ ಆಹ್ವಾನ ನೀಡಿದೆ. ಚೆನ್ನಮ್ಮಾಜಿಯ ಜಯಂತ್ಯುತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ತಿರ್ಮಾನಿಸಲಾಗಿದೆ. ಮೆರವಣಿಯಲ್ಲಿ ಗ್ರಾಮೀಣ ಸೊಗಡಿನ ಕರಡಿ ಮಜಲು, ನಂದಿಕೋಲು, ಡೋಳ್ಳು ಕುಣಿತ, ಗೊಂಬೆಗಳು ಸೇರಿದಂತೆ ಹಲವಾರು ವಾದ್ಯ ವೃಂದಗಳ ತಂಡಗಳು ಭಾಗವಹಿಸಲಿವೆ ಎಂದರು.
ಅದ್ದೂರಿ ಮೆರವಣಿಗೆ ನಂತರ ಬಸವೇಶ್ವರ ಸರ್ಕಲ್ನಲ್ಲಿ ಮದ್ಯಾಹ್ನ 3 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹರಿಹರ ಮತ್ತು ಕೂಡಲಸಂಗಮದ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ, ಅತಿಥಿಗಳಾಗಿ ವಿದ್ಯಕುಮಾರ್ ಗಡ್ಡಿ, ಮೋಹನ್ ಮಾಳಶೆಟ್ಟಿ, ಶಾಂತಣ್ಣ ಮುಳವಾಡ, ಎಫ್.ವ್ಹಿ. ಮರಿಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದರು.
ಈ ವೇಳೆ ಅಯ್ಯಪ್ಪ ಅಂಗಡಿ, ಬಸವಣೆಪ್ಪ ಚಿಂಚಲಿ, ಪ್ರಕಾಶ ಅಂಗಡಿ, ಮಾಂತೇಶ ನೆಲೂಡಿ, ಪಿ.ಕೆ. ಮಟ್ಟಿ, ಡಾ. ಶಿವನಗೌಡ್ರ, ಬಿ.ಬಿ. ಸೂರಪ್ಪಗೌಡ್ರ, ವಸಂತ ಪಡಗದ, ಸಂತೋಷ ಕಬಾಡರ, ಸಿದ್ದು ಜೀವನಗೌಡ್ರ, ಬಸವರಾಜ ಗಡ್ದೆಪ್ಪನವರ, ಶಿವರಾಜಗೌಡ ಹಿರೇಮನಿಪಾಟೀಲ ಉಪಸ್ಥಿತರಿದ್ದರು.
ಪಂಚಮಸಾಲಿ ಸಮುದಾಯದ ಅಗ್ರಗಣ್ಯ ನಾಯಕರ ಪೈಕಿ ನರಗುಂದ ಮತಕ್ಷೇತ್ರದ ಹಾಲಿ ಶಾಸಕ ಸಿ.ಸಿ. ಪಾಟೀಲ ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಅದ್ದೂರಿ ಚೆನ್ನಮ್ಮಾಜಿ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಬಿಜೆಪಿ ದಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಸಿ.ಸಿ.ಪಿ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆಯೇ ಎನ್ನುವ ಚರ್ಚೆ ನಡೆದಿದೆ.



