ಉತ್ತಮ ಗುಣಗಳಿದ್ದರೆ ದೇವರು ಅಂಥವರ ಉದ್ಧಾರ ಮಾಡುತ್ತಾನೆ’ ಎಂದು ಮಾರ್ಮಿಕವಾಗಿ ನಮ್ಮನ್ನು ಎಚ್ಚರಿಸಿ, ಜಗತ್ತಿಗೆ ತೋರಿಸಿಕೊಟ್ಟ ಮಹಾಮಹಿಮರು ನಮ್ಮ ಕನಕದಾಸರು. ಕನಕ ನಡುಗನ್ನಡ ಸಾಹಿತ್ಯದ ಪ್ರಮುಖ ಕೀರ್ತನೆಕಾರ, ಸಾಮಂತ, ಜ್ಞಾನಿ, ಕನ್ನಡ ಭಾಷಾ ಶ್ರೇಷ್ಠ ದಾರ್ಶನಿಕ ಕವಿ ಚಿಂತಕ. ಸಮನ್ವಯ ದಾಸ ಸಾಹಿತ್ಯದ ಸಂತ. ಕ್ರಾಂತಿಕಾರಿ ಹರಿದಾಸ ಮತ್ತು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಹಾಗೂ ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. 15-16ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತರು ಕನಕದಾಸರು.
ಇವರು ಹುಟ್ಟಿದ್ದು 1509ರಲ್ಲಿ, ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ, ಬಂಕಾಪುರ ಸಮೀಪದ ಬಾಡ ಗ್ರಾಮದಲ್ಲಿ. ಇವರ ತಂದೆ ಬೀರಪ್ಪ, ತಾಯಿ ಬಚ್ಚಮ್ಮ. ಇವರ ಮಡದಿಯ ಹೆಸರು ಮುಕುತಿ. ಕಾಗಿನೆಲೆಯ ಆದಿಕೇಶವ ಇವರ ಆರಾಧ್ಯ ದೈವ. ಕನಕದಾಸರ ನಿಜವಾದ ಹೆಸರು ತಿಮ್ಮಪ್ಪನಾಯಕ ಎಂದಾಗಿತ್ತು. ದಾಸ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಗೆ ನಾಂದಿ ಹಾಡಿದ ಪುರಂದರದಾಸರ ಆರಾಧಕ ಹಾಗೂ ದಾಸಶ್ರೇಷ್ಠರು ಕನಕದಾಸರು. ಸಮಾಜದಲ್ಲಿ ಗುಣಕ್ಕಿಂತ ಕುಲವೇ ಮುಖ್ಯವೆಂದು ಬೀಗುವವರನ್ನು ಕಂಡ ಕನಕದಾಸರು, ಕುಲದ ನೆಲೆಯನೇನಾದರು ಬಲ್ಲಿರಾ’ ಎಂದು ಪ್ರಶ್ನಿಸುತ್ತ, ಗುಣ ಮುಖ್ಯವೇ ಹೊರತು ಕುಲವಲ್ಲ ಎಂಬ ಸಂದೇಶವನ್ನು ಸಾರಿದರು.
ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು ಕನಕದಾಸರು. ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು 500 ವರ್ಷಗಳ ಭವ್ಯ ಇತಿಹಾಸವಿದೆ. ಕನಕದಾಸರು ಮತ್ತು ಪುರಂದರದಾಸರತಹ ವೈಚಾರಿಕ ಸಂತರಾಗಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು-ಕೀಳು ಎಂಬ ಭಾವನೆ ಮತ್ತು ಜಾತಿ-ಮತಗಳ ಸಿದ್ಧಾಂತ ಪಕ್ಕಕ್ಕೆ ಸರಿದವು. ದೈವಸ್ತುತಿಯೇ ಪ್ರಮುಖವೆನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧೃವತಾರೆಯಂತೆ ಅವತರಿಸಿದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ,ತನ್ಮೂಲಕ ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದ್ದಾರೆ.
ಕನಕರು ಆದಿಗುರು ಶ್ರೀ ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿರುವ ಆದೈತ ತತ್ತ್ವಸಾರವನ್ನನುಸರಿಸಿ ನಾನು, ನನ್ನದೆಂಬ ಮೋಹ, ಪರಬ್ರಹ್ಮ, ಬದುಕು, ಜೀವನಸಾರವನ್ನು ಬೋಧಿಸಿ ಮನುಜಕುಲ ಒಂದೆಬ ತತ್ತ್ವ ಸಾರಿದವರು. ಐದು ಶತಮಾನಗಳ ಹಿಂದೆಯೇ ಒಬ್ಬ ಹರಿದಾಸ, ಆಧ್ಯಾತ್ಮಿಕ ಸಂತಕವಿ ಮಾನವನ ಬದುಕಿನಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರಿಸುತ್ತಲೇ ಜೀವನ ಮೌಲ್ಯಗಳನ್ನು ತಿಳಿಹೇಳಿದರು. ಹಾಗಾಗಿ ಅವರ ಮೌಲ್ಯಯುತವಾದ ನುಡಿಗಳು ಇಂದಿಗೂ ಪ್ರಸ್ತುತವಾಗಿವೆ.
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು, ಉಡುಪಿ ಶ್ರೀಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ. ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳನ್ನು ಕನ್ನಡ ಸಾಹಿತ್ಯಕ್ಕೆ ಅರ್ಪಿಸಿರುವುದಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆಯನ್ನು ಮಂಡುಗೆಗಳ ರೂಪದಲ್ಲಿ ನೀಡಿದ್ದಾರೆ.
ವಿದ್ವತ್ ಸಂಪನ್ನ ಕನಕದಾಸರು ಕುಲಾತೀತರಾಗಿ, ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವಿತೀಯ ಸ್ಥಾನಗಳಿಸಿ ಚಿರಸ್ಮರಣೀಯರಾಗಿದ್ದಾರೆ. ಭಕ್ತಿ ಎಂಬುದು ಪಾರಾಯಣ ಮಾಡುವುದಕ್ಕಲ್ಲ. ಜ್ಞಾನೋಪಾಸನೆಗೆ ಎಂಬ ದಾರಿಯಲ್ಲಿ ತೊಡಗಿಸಿಕೊಂಡ ದಾಸರ ವೈಶಿಷ್ಟ್ಯ ಭಕ್ತಿಯ ಸಾಮಾಜೀಕರಣ ಅವರ ವಿಶೇಷ ಸಾಧನೆ. ದಾಸರು ಹೊಸಗನ್ನಡ ಸಾಹಿತ್ಯ ಕೋಗಿಲೆ. ಎಲ್ಲ ಮತೀಯ ಬಂಧನಗಳಿಂದ ಪಾರಾಗಿ, ಸಾಮಾಜಿಕ ಕಟ್ಟುನಿಟ್ಟುಗಳಿಂದ ಮುಕ್ತರಾಗಿ ಆಧ್ಯಾತ್ಮ ಸಿದ್ಧಿಯ ಶಿಖರವನ್ನೇರಿದ ವಿಶ್ವಬಂಧು ಸಂತಕವಿ. ಅವರ ಕೃತಿಗಳನ್ನು ಸರ್ವರೂ ಅಭ್ಯಸಿಸಲಿ, ದಾಸರ ಆದರ್ಶಗುಣಗಳು ವಿಶ್ವವ್ಯಾಪಕವಾಗಲೆಂದು ಆಶಿಸುತ್ತಾ ಕನಕದಾಸರಿಗೆ ನಮ್ಮ ಶಿರಸಾಷ್ಟಾಂಗ ಪ್ರಣಾಮಗಳು.
ಶ್ರೇಷ್ಠ-ಕನಿಷ್ಠ ಎಂಬ ಭೇದ-ಭಾವಗಳನ್ನು, ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೌಢ್ಯ, ಅಜ್ಞಾನ, ಅಂಧಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ರಚನೆಯ ರಾಮಧಾನ್ಯ ಚರಿತೆ, ನಳಚರಿತೆ, ಮೋಹನತರಂಗಿಣಿ ಕೃತಿಗಳು ವರ್ಣಾಶ್ರಮ ವಿರುದ್ಧ ಹಾಗೂ ಸಮಸಮಾಜ ಪರಿಕಲ್ಪನೆಯನ್ನು ಸಾಬೀತುಪಡಿಸುತ್ತವೆ. ಕನಕದಾಸರು ರಚಿಸಿದ ಕೀರ್ತನೆಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ.

ಬಸವರಾಜ ಎಮ್.ಯರಗುಪ್ಪಿ.
ಶಿಕ್ಷಕರು, ಲಕ್ಷ್ಮೇಶ್ವರ


