ಕೆಎಸ್‌ಎಂಸಿಎ ಸಂಸ್ಥೆಯಿಂದ ಸರ್ಕಾರಕ್ಕೆ ವಿಶೇಷ ಲಾಭಾಂಶ ಮೊತ್ತ ನೀಡಿಕೆ

0
Spread the love

ವಿಜಯಸಾಕ್ಷಿ ಸುದ್ದಿ, ಕಾರವಾರ: ಕರ್ನಾಟಕ ರಾಜ್ಯ ಸರ್ಕಾರದ ಏಕೈಕ ಜಾಹೀರಾತು ಸಂಸ್ಥೆಯಾದ ಮೆ|| ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಶನ್ ಲಿಮಿಟೆಡ್ (ಕೆಎಸ್‌ಎಂಸಿಎ) ಕಂಪನಿಯು ವಿಶೇಷ ಲಾಭಾಂಶದ ಮೊತ್ತ ರೂ.34.13 ಕೋಟಿಗಳನ್ನು ಗುರುವಾರ ಸರ್ಕಾರಕ್ಕೆ ನೀಡಿತು.

Advertisement

ಕಂಪನಿಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮತ್ತು ಕೆಎಸ್‌ಎಂಸಿಎ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸತೀಶ ಕೃಷ್ಣ ಸೈಲ್ ಅವರು ವಿಧಾನಸೌಧದಲ್ಲಿ ವಿಶೇಷ ಲಾಭಾಂಶದ ಚೆಕ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಸಂಸ್ಥೆಯು ಇದುವರೆಗೆ ಯಶಸ್ಸಿನ ಪಥದಲ್ಲಿ, ಲಾಭದಾಯಕವಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ. ಆದರೆ, ಸಂಸ್ಥೆಯು ಈ ಹಿಂದೆ ನಿರ್ವಹಿಸಿಕೊಂಡು ಬಂದಿದ್ದ ಅಬಕಾರಿ ಭದ್ರತಾ ಚೀಟಿ ಮುದ್ರಣ ಮತ್ತು ಮಾರಾಟ ವ್ಯವಹಾರವು ಸಂಸ್ಥೆಯಿಂದ ಕೈಬಿಟ್ಟು ಹೋಗಿರುವುದರಿಂದ ಸಂಸ್ಥೆಯ ವಹಿವಾಟು ಮತ್ತು ಲಾಭದಾಯಕತೆ ಕಡಿಮೆಯಾಗಿದೆ. ಮುಖ್ಯಮಂತ್ರಿಗಳು ಈ ಅಬಕಾರಿ ಭದ್ರತಾ ಚೀಟಿ ಮುದ್ರಣ ಮತ್ತು ಮಾರಾಟ ವ್ಯವಹಾರವನ್ನು ಮತ್ತೆ ಕೆಎಸ್‌ಎಂಸಿಎ ಸಂಸ್ಥೆಗೆ ವಹಿಸಿಕೊಡಬೇಕು ಹಾಗೂ ಸಂಸ್ಥೆಯ ಆರ್ಥಿಕಾಭಿವೃದ್ಧಿಗೆ ಬೆಂಬಲಿಸಬೇಕೆಂದು ಕೋರಿದರು.

ಕೆಎಸ್‌ಎಂಸಿಎ ಅಧ್ಯಕ್ಷ ಸತೀಶ ಕೃಷ್ಣ ಸೈಲ್ ಮಾತನಾಡಿ, ಸರ್ಕಾರವು ಸಂಸ್ಥೆಗೆ ನೀಡಲಾಗಿರುವ 4ಜಿ ವಿನಾಯಿತಿಯಲ್ಲಿ ಹೆಚ್ಚುವರಿಯಾಗಿ ಡಿಜಿಟಲೈಜೇಶನ್ ಕಾರ್ಯ ಚಟುವಟಿಕೆಗಳನ್ನು ಸೇರ್ಪಡೆ ಮಾಡಲು ಹಾಗೂ ಸಂಸ್ಥೆಯ ಜಾಹೀರಾತು ಬಿಡುಗಡೆ ಬಾಕಿ ಮೊತ್ತವನ್ನು ಸಕಾಲದಲ್ಲಿ ಪಾವತಿ ಮಾಡಲು ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಇದನ್ನು ಪರಿಗಣಿಸಿ ಅನುಮೋದನೆ ನೀಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ಅತೀಕುಲ್ಲಾ ಶರೀಫ್ ಹಾಗೂ ಉಪ ಪ್ರಧಾನ ವ್ಯವಸ್ಥಾಪಕ ಪಿ.ಎಸ್. ನಂದೀಶ ಉಪಸ್ಥಿತರಿದ್ದರು.

 


Spread the love

LEAVE A REPLY

Please enter your comment!
Please enter your name here