ಕಲಬುರ್ಗಿ:- ಶಿಕ್ಷಕನೊಬ್ಬ ಸಾಲಬಾಧೆ ತಾಳಲಾರದೆ ಮನೆಗಳ್ಳತನಕ್ಕೆ ಇಳಿದು ಇದೀಗ ಸಿಕ್ಕಿಬಿದ್ದಿರುವಂತಹ ಘಟನೆ ಕಲಬುರ್ಗಿಯಲ್ಲಿ ಜರುಗಿದೆ.
ಮಹ್ಮದ್ ಆರೀಫ್ ಅಲಿ ಬಂಧಿತ ಶಿಕ್ಷಕ. ವಿಶ್ವವಿದ್ಯಾಲಯ ಠಾಣಾ ಪೊಲೀಸರು ಬಂಧಿತನಿಂದ 100 ಗ್ರಾಂ ಚಿನ್ನಾಭರಣ, 16 ಸಾವಿರ ರೂ ಮೌಲ್ಯದ ಬೆಳ್ಳಿ, ಬೈಕ್ ಸೇರಿದಂತೆ 13.41 ಲಕ್ಷ ರೂ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ.
ಕಲಬುರಗಿ ನಗರದ ಬಿಲಾಲಬಾದ್ ಕಾಲೋನಿಯ ನಿವಾಸಿ ಮಹ್ಮದ್ ಆರೀಫ್ ಅಲಿ ಮಸೀದಿಯೊಂದರಲ್ಲಿ ಕುರಾನ್ ಬೋಧಿಸುವ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ತಾವಾಯಿತು ತಮ್ಮ ಕೆಲಸವಾಯಿತು ಅಂತಾ ಇದ್ದಿದ್ದರೆ ಇಂದು ಕಲಬುರಗಿ ಪೊಲೀಸರ ಅತಿಥಿಯಾಗುತ್ತಿರಲಿಲ್ಲ. ಆದರೆ ತಮ್ಮ ಶಿಕ್ಷಕ ವೃತ್ತಿ ಬಿಟ್ಟು ಕಳೆದ ಏಳೆಂಟು ತಿಂಗಳಿನಿಂದ ಕಳ್ಳತನ ವೃತ್ತಿಗೆ ಇಳಿದಿದ್ದರು.
ಅದರಂತೆ ಬೆಳಗ್ಗೆ ಮಸೀದಿಯಲ್ಲಿ ಕುರಾನ್ ಬೋಧಿಸಿ ಮಧ್ಯಾಹ್ನ ಮತ್ತು ಸಂಜೆ ಕೆಲಸದ ಬಿಡುವಿನ ವೇಳೆ ನಗರದ ತಮ್ಮ ಬಡಾವಣೆಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ವಾಚ್ ಮಾಡುತ್ತಿದ್ದರು. ನಸುಕಿನ ಜಾವ 3 ಗಂಟೆ ಬಳಿಕ ಜನ ಗಾಡ ನಿದ್ರೆಯಲ್ಲಿದ್ದಾಗ ಕಬ್ಬಿಣದ ರಾಡ್‌ನಿಂದ ಮನೆ ಬೀಗ ಒಡೆದು ಕನ್ನ ಹಾಕುತ್ತಿದ್ದರು.
ಈ ಸಂಬಂಧ ವಿವಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿತ್ತು. ತನಿಖೆ ಕೈಗೊಂಡ ಪೋಲೀಸರು, ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.


