ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಮ್ಮ ವಚನ ಮತ್ತು ಕೀರ್ತನೆಗಳ ಮೂಲಕ ಸಮಾಜದ ಒಳಿತು-ಕೆಡುಗಳನ್ನು ವಿಶ್ಲೇಷಿಸಿ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಜೀವನ ಸಂದೇಶ ನೀಡಿದ ದಾರ್ಶನಿಕರಲ್ಲಿ ಕನಕದಾಸರು ಸಮಾಜ ಪರಿವರ್ತಕರಾಗಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಪುರಸಭೆ ಕಾರ್ಯಾಲಯದಲ್ಲಿ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಯಾವುದೇ ಒಂದು ಜಾತಿ, ಧರ್ಮ, ಪ್ರದೇಶ, ಭಾಷೆಗೆ ಸೀಮಿತವಾಗದ ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿದೆ. ಕನಕದಾಸರು ಸದಾ ಕ್ರಾಂತಿಕಾರರು ಹಾಗೂ ಸಮಾಜ ಸುಧಾರಕರಾಗಿದ್ದರು. ಕನಕ, ಬಸವ, ಬುದ್ಧ ಮುಂತಾದವರು ಎಲ್ಲಾ ಕಾಲಕ್ಕೂ ಸಲ್ಲುವವರು. ಇವರ ವಿಚಾರಗಳು ಕಾಲಾತೀತವಾಗಿದೆ ಎಂದು ಹೇಳಿದರು.
ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ತೊರೆದು ಜನರನ್ನು ಕೀರ್ತನೆಗಳ ಮೂಲಕ ಮನಃಪರಿವರ್ತನೆ ಮಾಡಿದ ಕನಕದಾಸರು ಒಬ್ಬ ಯುಗ ಪುರುಷರಾಗಿದ್ದಾರೆ. ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ-ಸಂದೇಶಗಳ ಅವಶ್ಯಕತೆ ಇದೆ. ಭಕ್ತನ ಭಕ್ತಿ ದೇವರಿಗಿಂತ ದೊಡ್ಡದು. ದಾಸ ಶ್ರೇಷ್ಠರಲ್ಲಿಯೇ ಶ್ರೇಷ್ಠ ದಾಸರು ಕನಕದಾಸರು. ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಬನ್ನಿ, ತಿಪ್ಪಣ್ಣ ಸಂಶಿ, ರಾಜು ಓಲೇಕಾರ, ಗಂಗಾಧರ ಮೆಣಸಿನಕಾಯಿ, ಬಸವಣ್ಣೆಪ್ಪ ನಂದೆಣ್ಣವರ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶೋಭಾ ಬೆಳ್ಳಿಕೊಪ್ಪ, ಮಂಜುನಾಥ ಮುದಗಲ್, ಹನುಮಂತ ನಂದೆಣ್ಣವರ, ಎಸ್.ಪಿ. ಲಿಂಬಯ್ಯನಮಠ, ಸುರೇಶ ಪೂಜಾರ, ವೆಂಕಟೇಶ ರಾಮಗಿರಿ, ಎಂ.ಎಸ್. ಹೆಬ್ಬಾಳ, ನೇತ್ರಾ ಹೊಸಮನಿ ಮತ್ತಿತರಿದ್ದರು.


