ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆರ್‌ಎಸ್‌ಎಸ್ ನಿಷೇಧ ಮಾಡುವದು ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆಯವರಿಂದ ಸಾಧ್ಯವಿಲ್ಲ. ಜನರ ಮನಸ್ಸಿನಲ್ಲಿ ಬೇರೂರಿರುವ ಆರ್‌ಎಸ್‌ಎಸ್ ಈಗಾಗಲೇ 2-3 ಬಾರಿ ನಿಷೇಧ ವಿಧಿಸಿದ್ದರೂ ಎಲ್ಲ ಕಂಟಕಗಳನ್ನು ದೂರ ಮಾಡಿಕೊಂಡು ಮತ್ತೆ ಎದ್ದು ನಿಂತಿದೆ. ಇದನ್ನು ನಿಷೇಧ ಮಾಡುವ ಹೇಳಿಕೆ ನೀಡುವುದು ಮೂರ್ಖತನ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಮುತ್ತು ಕರ್ಜೆಕಣ್ಣವರ ಅವರ ನಿವಾಸದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದೇಶ ಹೋಳು ಮತ್ತು ಹಾಳು ಮಾಡಿದ ಕಾಂಗ್ರೆಸ್‌ನಂತೆ ಆರ್‌ಎಸ್‌ಎಸ್ ಸಂಘಟನೆ ಅಲ್ಲ. ಆರ್‌ಎಸ್‌ಎಸ್ ಒಂದು ದೇಶಭಕ್ತ ಸಂಘಟನೆಯಾಗಿದೆ. ಆದ್ದರಿಂದಲೇ 100 ವರ್ಷಗಳಾದರೂ ಇನ್ನೂ ಸಹ ಅದರಲ್ಲಿ ಯಾವುದೇ ಒಡಕು ಕಂಡುಬಂದಿಲ್ಲ. ಲಕ್ಷಾಂತರ ಸ್ವಯಂ ಸೇವಕರ ಶ್ರಮದಿಂದ ಆರ್‌ಎಸ್‌ಎಸ್ ಬಲಿಷ್ಠವಾಗಿದೆ. ಇದನ್ನು ಸಚಿವ ಪ್ರಿಯಾಂಕ್ ಖರ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಲೇವಡಿ ಮಾಡಿದರು.
ಆರ್‌ಎಸ್‌ಎಸ್ ಬಗ್ಗೆ ಖರ್ಗೆಯವರು ನೀಡಿದ ಹೇಳಿಕೆಯನ್ನು ವಾಪಸ್ಸು ಪಡೆದು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ ಪ್ರಮೋದ ಮುತಾಲಿಕ್, ಆರ್‌ಎಸ್‌ಎಸ್ ಯಾವುದೇ ರಾಜಕೀಯ ಸಂಘಟನೆಯಲ್ಲ. ಇದು ಪಕ್ಕಾ ದೇಶಭಕ್ತರ ಸಂಘಟನೆ. ಇದರಲ್ಲಿ ಎಲ್ಲ ಪಕ್ಷದವರೂ ಇದ್ದಾರೆ. ಮುಸ್ಲಿಮರು ಈ ಕಾಂಗ್ರೆಸ್‌ನಲ್ಲಿ ಹೊಕ್ಕು ಹಿಂದೂ ಸಂಘಟನೆ, ಒಗ್ಗಟ್ಟು ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ನೆಹರುರವರು ದೇಶದ ಒಂದಿಂಚು ಜಾಗೆಯಲ್ಲಿಯೂ ಭಗವಾದ್ವಜ ಹಾರಾಡಲು ಅವಕಾಶ ನೀಡುವದಿಲ್ಲ ಎಂದು ಹೇಳಿದ್ದರು. ಇದೀಗ ನಮ್ಮ ಸನಾತನ ಧರ್ಮ ಸಂಕೇತದ ಭಗವಾದ್ವಜವನ್ನು ನಿಮ್ಮ ಮನೆಯ ಮೇಲೂ ಹಾರಿಸುತ್ತೇವೆ ಎಂದರು
ಹಿಂದೂ ಧರ್ಮದವರ ಹಬ್ಬಗಳ ಆಚರಣೆಗೆ ಸರಕಾರ ನೂರಾರು ಕರಾರುಗಳನ್ನು ಹಾಕುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಡಿಜೆ ಹಚ್ಚಬೇಡಿ ಎಂದು ಹೇಳುವ ಕಾಂಗ್ರೆಸ್, ಮುಸ್ಲಿಮರ ಪ್ರಾರ್ಥನೆಯನ್ನು ಮೊದಲು ತಡೆಯಿರಿ. ಇಲ್ಲದಿದ್ದಲ್ಲಿ ನಾವು ಡಿಜೆ ಹಚ್ಚುವದು ನಿಲ್ಲುವದಿಲ್ಲ ಮತ್ತು ಗಣೇಶನ ಹಬ್ಬಕ್ಕೆ ಅನುಮತಿಯನ್ನು ಸಹ ಮುಂದಿನ ವರ್ಷದಿಂದ ತೆಗೆದುಕೊಳ್ಳುವದಿಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಈ ವೇಳೆ ಗದಗ ಜಿಲ್ಲಾ ಶ್ರೀರಾಮ ಸೇನೆ ಅಧ್ಯಕ್ಷ ಸೋಮು ಗುಡಿ, ರಾಜ್ಯ ಶಾರೀರಿಕ ಪ್ರಮುಖ ಹುಲಿಗೆಪ್ಪ ವಾಲ್ಮೀಕಿ, ಶಿವರಾಜ ಅಂಬಾರಿ, ಈರಣ್ಣ ಪೂಜಾರ, ಭರತ ಲದ್ದಿ, ಮಂಜು ಕಾಟ್ಕರ್, ಮುತ್ತು ಕರ್ಜೆಕಣ್ಣವರ, ಪ್ರಾಣೇಶ ವ್ಯಾಪಾರಿ, ಬಸವರಾಜ ಚಕ್ರಸಾಲಿ, ಬಸವರಾಜ ಗೌಡರ, ಅಮಿತ ಗುಡಗೇರಿ, ಹನುಮಂತ ರಾಮಗೇರಿ, ಚನ್ನಪ್ಪ ಹಾಳದೋಟದ, ಪವನ ಹಗರದ, ಪ್ರವೀಣ ಬನ್ನಿಕೊಪ್ಪ, ಮನೋಜ ತಂಡಿಗೇರ, ಅಕ್ಷಯ ಕುಮಸಿ ಮುಂತಾದವರಿದ್ದರು.
ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಸರಕಾರಿ ಜಾಗೆ ಬೇಕೆಂದಿಲ್ಲ. ದೇಶದಲ್ಲಿ ಸಾಕಷ್ಟು ಜಾಗೆಗಳಿವೆ, ಅಲ್ಲಿ ಕಾರ್ಯಕ್ರಮ ನಡೆಸುತ್ತೇವೆ. ಯಾರು ತಡೆಯುತ್ತಾರೋ ನೋಡಿಕೊಳ್ಳುತ್ತೇವೆ. ಆರ್‌ಎಸ್‌ಎಸ್ ಅನ್ನು ಎಷ್ಟು ಕೆಣಕುತ್ತೀರೋ ಅಷ್ಟು ಪ್ರಬಲವಾಗಿ ಬೆಳೆಯುತ್ತದೆ. ಆರ್‌ಎಸ್‌ಎಸ್ ಜೊತೆ ಸಂಘರ್ಷಕ್ಕೆ ಇಳಿದರೆ ನೀವೇ ಹಿಂದೂ ದ್ರೋಹಿಗಳಾಗುತ್ತೀರಿ. ದಲಿತ ಸಂಘಟನೆಗಳು, ಭೀಮ ಆರ್ಮಿ ಎನ್ನುವ ಸಂಘಟನೆಗಳನ್ನು ಸಂಘರ್ಷಕ್ಕೆ ಇಳಿಯುವಂತೆ ಮಾಡುತ್ತಿದ್ದೀರಿ, ಇದನ್ನು ಜನರು ಕ್ಷಮಿಸುವದಿಲ್ಲ. ಯಾವುದೇ ಸರಕಾರಿ ಜಾಗೆಯಲ್ಲಿ ಕಾರ್ಯಕ್ರಮ ಮಾಡಬಾರದು ಎನ್ನುತ್ತೀರಿ. ಇದು ದೇಶದ ಹಿಂದೂಗಳ ಜಾಗೆ. ಇಲ್ಲಿ ಕಾರ್ಯಕ್ರಮ ಮಾಡಬಾರದು ಎನ್ನಲು ನೀವ್ಯಾರು ಎಂದು ಮುತಾಲಿಕ್ ಪ್ರಶ್ನಿಸಿದರು.


