ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬ್ರಾಹ್ಮಣರು ಸಮಾಜದಲ್ಲಿನ ಎಲ್ಲ ವರ್ಗಗಳ ಜನರಿಗೂ ಒಳಿತನ್ನು ಬಯಸುವವರಾಗಿದ್ದು, ಯಾವುದೇ ರೀತಿಯ ಸಮಾಜ ದ್ರೋಹಿ ಕಾರ್ಯಗಳನ್ನು ಮಾಡದೆ ಎಲ್ಲರ ಹಿತವನ್ನು ಬಯಸುವ ಸಮಾಜವಾಗಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ಅವರು ಪಟ್ಟಣದ ಶ್ರೀ ಶಂಕರಭಾರತಿಮಠದಲ್ಲಿ ಶನಿವಾರ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಂದು ಸಮಾಜ ಕಟ್ಟುವಲ್ಲಿ ಬ್ರಾಹ್ಮಣ ಸಮಾಜ ನೀಡಿದ ಕೊಡುಗೆ ಅಪಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಸಮಾಜವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಸಮಾಜದ ಪ್ರತಿಯೊಬ್ಬ ಪಾಲಕರು ತಮ್ಮ ತಮ್ಮ ಮಕ್ಕಳ ಕಡೆಗೆ ವಿಶೇಷ ಗಮನ ನೀಡುವುದು ಅವಶ್ಯವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಮತಾಂತರ ಇತ್ಯಾದಿಗಳನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಿಂದೂ ಸಮಾಜವನ್ನು ದೇಶದಲ್ಲಿ ಉಳಿಯುವಂತೆ ಮಾಡಿದ್ದು ಆದಿ ಶಂಕರಾಚಾರ್ಯರು. ಅವರಿಂದಲೇ ಹಿಂದೂ ಧರ್ಮ ಬೆಳಗುವಂತಾಯಿತು. ಸಮಾಜ ಬಾಂಧವರು ಒಗ್ಗಟ್ಟಾಗಿ ಸಾಗಿದಾಗ ಎಂತಹುದೇ ಕಠಿಣ ಪರಿಸ್ಥಿತಿ ಬಂದರೂ ಎದುರಿಸಬಹುದು ಎಂದು ಹೇಳಿದರು.
ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್, ಸಮಾಜದ ಹಿರಿಯರಾದ ನಾರಾಯಣಭಟ್ ಪುರಾಣಿಕ, ಪ್ರಹ್ಲಾದ್‌ರಾವ್ ಕುಲಕರ್ಣಿ, ಕೆ.ಎಸ್. ಕುಲಕರ್ಣಿ, ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ, ಎಸ್.ಜಿ. ಹೊಂಬಳ, ಅರವಿಂದ ದೇಶಪಾಂಡೆ, ಅನಿಲ ಕುಲಕರ್ಣಿ, ರಾಘವೇಂದ್ರ ಪೂಜಾರ, ಡಿ.ಎಂ. ಪೂಜಾರ, ಡಾ. ಪ್ರಸನ್ನ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಅನಂತಭಟ್ ಪೂಜಾರ ಮುಂತಾದವರಿದ್ದರು.


