ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆರೋಗ್ಯ ಸ್ಥಿತಿ ಗಂಭೀರ: ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

0
Spread the love

ಮುಂಬೈ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಕ್ಷಣದಲ್ಲಿ ಆಸ್ಪತ್ರೆ ಕಡೆಯಿಂದ ಅಧಿಕೃತ ವೈದ್ಯಕೀಯ ಪ್ರಕಟಣೆ ಹೊರಬೀಳದಿದ್ದರೂ, ಧರ್ಮೇಂದ್ರ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಸಹೋದ್ಯೋಗಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಆಪ್ತರು ಆಸ್ಪತ್ರೆಗೆ ಆಗಮಿಸಿದ್ದು, ಪತ್ನಿ ಹೇಮಾ ಮಾಲಿನಿ (Hema Malini) ಅವರು ಸಹ ಧರ್ಮೇಂದ್ರರನ್ನು ಭೇಟಿಯಾಗಿದ್ದಾರೆ.

ಕೆಲವೇ ದಿನಗಳ ಹಿಂದೆ ಧರ್ಮೇಂದ್ರ ಅವರು ಅದೇ ಆಸ್ಪತ್ರೆಗೆ ಭೇಟಿ ನೀಡಿ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಆದರೆ ಅದರ ನಂತರ ಅಲ್ಪ ಅವಧಿಯಲ್ಲೇ ಅವರ ಆರೋಗ್ಯ ಹದಗೆಟ್ಟಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಅವರನ್ನು ತೀವ್ರ ನಿಗಾ ಘಟಕದಲ್ಲಿ (ICU) ನಿಗಾದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಧರ್ಮೇಂದ್ರ ಅವರ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರು ಶೀಘ್ರದಲ್ಲೇ ತಂದೆಯ ಆರೋಗ್ಯ ಸ್ಥಿತಿ ಕುರಿತು ಹೇಳಿಕೆ ನೀಡುವ ಸಾಧ್ಯತೆ ಇದೆ.

89 ವರ್ಷದ ಧರ್ಮೇಂದ್ರ, 1960ರಿಂದ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ತಮ್ಮ ಆರು ದಶಕಗಳ ವೃತ್ತಿ ಜೀವನದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. “ಶೋಲೆ”, “ಚುಪ್ಕೆ ಚುಪ್ಕೆ”, “ಯಾದೋಂ ಕಿ ಬಾರಾತ್”, “ಸತ್ಯಕಾಮ್” ಮುಂತಾದ ಚಿತ್ರಗಳು ಅವರ ಅಭಿನಯ ಕೌಶಲ್ಯದ ಸಾಕ್ಷಿಗಳಾಗಿವೆ. ಹಿಂದಿ ಸಿನಿರಂಗದ ‘ಹೀ-ಮ್ಯಾನ್’ ಎಂದು ಅಭಿಮಾನಿಗಳು ಅವರನ್ನು ಕರೆಯುತ್ತಾರೆ.

ವಯೋಸಹಜ ಆರೋಗ್ಯ ಸಮಸ್ಯೆಗಳ ನಡುವೆಯೂ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆ. ಇತ್ತೀಚೆಗೆ 2024ರ ಫೆಬ್ರವರಿಯಲ್ಲಿ ಬಿಡುಗಡೆಯಾದ ತೇರಿ ಬಾತೋ ಮೇನ್ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿಯೂ ಅವರು ಅಭಿನಯಿಸಿದ್ದರು. ಜೊತೆಗೆ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ನಟನೆಯ ಮುಂದಿನ ಸಿನಿಮಾದಲ್ಲಿಯೂ ಧರ್ಮೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮೇಂದ್ರ ಅವರ ಚೇತರಿಕೆಗೆ ಹಾರೈಕೆ ವ್ಯಕ್ತಪಡಿಸುತ್ತಿದ್ದು, ಆಸ್ಪತ್ರೆ ಕಡೆಯಿಂದ ಆರೋಗ್ಯದ ಕುರಿತು ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.


Spread the love

LEAVE A REPLY

Please enter your comment!
Please enter your name here