ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳ ಬೆಳೆ ಕಟಾವು ಮುಗಿದಿರುವಾಗ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗಿಂತಲೂ ಕಡಿಮೆಯಾಗಿ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಕಂಗಾಲಾಗಿದ್ದು, ತಕ್ಷಣ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕೆಂಬ ಆಗ್ರಹ ಕೃಷಿಕರಿಂದ ವ್ಯಕ್ತವಾಗಿದೆ.
ಈ ಕುರಿತು ಲಕ್ಷ್ಮೇಶ್ವರ ತಾಲೂಕಾ ಸಮಗ್ರ ರೈತ ಹೋರಾಟ ಸಮಿತಿ ಹಾಗೂ ಕೃಷಿಕ ಸಮಾಜ (ದೆಹಲಿ) ಸಂಘಟನೆಯ ವತಿಯಿಂದ ತಹಸೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಉತ್ತರ ಕರ್ನಾಟಕ ಮಹಾಸಭೆಯ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ರೈತ ಮುಖಂಡ ಮಂಜುನಾಥ ಮಾಗಡಿ, ಕೃಷಿಕ ಸಮಾಜ (ದೆಹಲಿ) ತಾಲೂಕಾಧ್ಯಕ್ಷ ಚನ್ನಪ್ಪ ಷಣ್ಮುಖ ಮಾತನಾಡಿ, ಈ ಭಾಗದ ಪ್ರಮುಖ ಬೆಳೆ ಮೆಕ್ಕೆಜೋಳ ಈಗಾಗಲೇ ಕಟಾವಾಗಿದೆ. ಆದರೆ ಮಾರುಕಟ್ಟೆಯಲ್ಲಿ ದರ ರೂ. 1800ಕ್ಕೆ ಕುಸಿದಿದೆ. ರೈತರು 25-30 ಸಾವಿರ ರೂ. ಖರ್ಚು ಮಾಡಿ ಬೆಳೆದ ಬೆಳೆಗೆ ಇಷ್ಟೊಂದು ಕಡಿಮೆ ಬೆಲೆ ದೊರಕುತ್ತಿರುವುದು ಅತ್ಯಂತ ವಿಷಾದನೀಯ. ಸರ್ಕಾರ ತಕ್ಷಣ 2400 ರೂ. ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಬೆಂಬಲ ಬೆಲೆ ನಿಯಮದಂತೆ ಮಾರುಕಟ್ಟೆಯಲ್ಲಿ ದರ ಕುಸಿದ ತಕ್ಷಣ ಖರೀದಿ ಕೇಂದ್ರ ಆರಂಭವಾಗಬೇಕು. ಆದರೆ ಸರ್ಕಾರ ಇನ್ನೂ ಕೇಂದ್ರ ತೆರೆಯದಿರುವುದು ರೈತರ ಕೋಪಕ್ಕೆ ಕಾರಣವಾಗಿದೆ ಎಂದು ರೈತ ಚಂಬಣ್ಣ ಬಾಳಿಕಾಯಿ ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ದಿನಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸದಿದ್ದರೆ, ರೈತರು ಶ್ರೀಮಂತಗಡ ಹೊಳಲಮ್ಮನ ಗುಡ್ಡದಿಂದ ಲಕ್ಷ್ಮೇಶ್ವರದವರೆಗೆ ಪಾದಯಾತ್ರೆ ಮಾಡಿ ಶಿಗ್ಲಿ ಕ್ರಾಸ್‌ನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಂ.ಎಸ್. ದೊಡ್ಡಗೌಡರ, ಟಾಕಪ್ಪ ಸಾತಪುತೆ, ನಾಗರಾಜ ಚಿಂಚಲಿ, ನೀಲಪ್ಪ ಕರ್ಜಕಣ್ಣನವರ, ಮಲ್ಲಪ್ಪ ಅಂಕಲಿ, ಹೊನ್ನಪ್ಪ ವಡ್ಡರ, ಸೋಮಣ್ಣ ಡಾನಗಲ್, ಚಂದ್ರು ಮಾಗಡಿ, ಗುರಪ್ಪ ಮುಳುಗುಂದ, ಗಣೇಶ್ ನೂಲ್ವಿ, ಮಲ್ಲನಗೌಡ ಪಾಟೀಲ, ಬಸವರಾಜ ಜಾಲಗಾರ, ಜುಂಜನಗೌಡ ನರಸಮ್ಮನವರ, ಮಹಾಂತೇಶ, ದೇವಪ್ಪ ಲಮಾಣಿ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ ರೈತರು ಭಾಗವಹಿಸಿದ್ದರು.
ಮಾರುಕಟ್ಟೆಯಲ್ಲಿ ಅವಕ ಹೆಚ್ಚಳವಿದೆ ಎಂಬ ನೆಪದಲ್ಲಿ ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ರೈತರ ಮಹಸೂಲಿಗೆ ಕಡಿಮೆ ಬೆಲೆ ನಿಗದಿಪಡಿಸಿ ಹಿಂಸಿಸುತ್ತಿದ್ದಾರೆ. ಸರ್ಕಾರ ನೇರವಾಗಿ ರೈತರಿಂದ ಖರೀದಿ ಮಾಡಿ ಪಾವತಿ ಮಾಡುವ ವ್ಯವಸ್ಥೆ ಮಾಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ನೀಡುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
– ಮಂಜುನಾಥ ಮಾಗಡಿ, ರೈತ ಮುಖಂಡ.
ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೇ ಇಲ್ಲದೆ ಕಂಗಾಲಾಗಿದ್ದಾರೆ. ಈ ಕೂಡಲೇ ಸರ್ಕಾರ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ 2400 ರೂಪಾಯಿ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳನ್ನು ತೆರೆದು ಖರೀದಿಸಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.
– ರವಿಕಾಂತ ಅಂಗಡಿ, ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ.



