ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇರುವಷ್ಟು ದಿನ ಎಲ್ಲರೂ ಆರೋಗ್ಯದಿಂದ ಇರುವುದು ಮುಖ್ಯ. ಆದ್ದರಿಂದ ನಿವೃತ್ತ ಸೈನಿಕರಿಗೆಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಹೇಳಿದರು.
ನಿವೃತ್ತ ಸೈನಿಕರ ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಕ್ಕಿಂತ ಮಿಗಿಲಾದ ಸಂಪತ್ತು ಆರೋಗ್ಯ ಸಂಪತ್ತು. ಸೇವೆಯಲ್ಲಿರುವಷ್ಟು ದಿನ ನಮಗೆ ಭಾರತ ಮಾತೆಯ ಸೇವೆ ಮಾಡುವ ಭಾಗ್ಯ ಸಿಕ್ಕಿತ್ತು. ಅದನ್ನು ನಿಸ್ಪೃಹತೆಯಿಂದ ಮಾಡಿ ಬಂದಿದ್ದೇವೆ. ಈಗ ನಮ್ಮ ಕುಟುಂಬದೊಂದಿಗೆ ಇರುವ ಸಂದರ್ಭದಲ್ಲಿ ಯಾವ ಕಾರಣಕ್ಕೂ ಆರೋಗ್ಯವನ್ನು ಹಾಳು ಮಾಡಿಕೊಳ್ಳದೆ ಸುಖ, ಸಂತೋಷ, ನೆಮ್ಮದಿಯಿಂದ ಬದುಕೋಣ ಎಂದರು.
ಜೀವಿತಾವಧಿ ಪತ್ರವನ್ನು ಕೊಟ್ಟಿಲ್ಲದವರು ಕೂಡಲೇ ಕೊಡಬೇಕು. ಇಲ್ಲವಾದರೆ ಪಿಂಚಣಿಗೆ ತೊಂದರೆಯಾಗುತ್ತದೆ. ಸದಸ್ಯರು ಪ್ರತಿ ತಿಂಗಳ ಮಾಸಿಕ ಸಭೆಗೆ ತಪ್ಪದೇ ಹಾಜರಾದರೆ ಸಭೆಯಲ್ಲಿನ ವಿಷಯಗಳು ತಿಳಿಯುತ್ತವೆ. ಇಂದಿನಿಂದ ಪ್ರಾರಂಭಗೊಂಡಿರುವ ಹಿರೇಮಠದ ಜಾತ್ರಾ ಮಹೋತ್ಸವದಲ್ಲಿ ನಾವೂ ಪಾಲ್ಗೊಂಡು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರ ಪ್ರವಚನ ಕೇಳಿ ಜ್ಞಾನ ವೃದ್ಧಿಸಿಕೊಳ್ಳೋಣ ಎಂದರು.
ಮಾಸಿಕ ಸಭೆಯಲ್ಲಿ ಬಸವೇಶ್ವರ ಚಿಕ್ಕೊಪ್ಪದ, ಶಿವಪ್ಪ ಹಂಡಿ, ಸಂಗಪ್ಪ ಕುಷ್ಟಗಿ, ರಾಮಪ್ಪ ರೋಣದ, ಶಶಿಕಾಂತ ಕರಡಿ, ಗುರುಶಾಂತಗೌಡ ಮಲ್ಲನಗೌಡ್ರ, ಈಶ್ವರಚಂದ್ರ ಬಾಗಲಿ, ಆಂಜನೇಯ ಪೂಜಾರ, ಮಲ್ಲಿಕಾರ್ಜುನ ಮಲ್ಲನಗೌಡ್ರ, ಮಂದಾಲಪ್ಪ ಸಂಗನಾಳ, ದಾದಾಸಾಬ ನದಾಫ್, ಈರಪ್ಪ ದೊಡ್ಡಣ್ಣವರ ಇನ್ನಿತರರು ಪಾಲ್ಗೊಂಡಿದ್ದರು.


