HomeDharwadಗಾಂಧೀಜಿಯವರ ಸ್ವರಾಜ್ಯದ ಕನಸು ನನಸು ಮಾಡೋಣ: ಡಿ.ಆರ್. ಪಾಟೀಲ

ಗಾಂಧೀಜಿಯವರ ಸ್ವರಾಜ್ಯದ ಕನಸು ನನಸು ಮಾಡೋಣ: ಡಿ.ಆರ್. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಗ್ರಾಮೀಣ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆ ಆಗುವ ಅನುದಾನದ ಪ್ರತಿ ಪೈಸೆಯೂ ಸದುಪಯೋಗವಾಗಬೇಕು. ಯೋಜನೆಗೆ ಅನುಗುಣವಾಗಿ ಹಣ ಬಳಕೆ ಆಗಬೇಕು. ಅಭಿವೃದ್ಧಿಯಲ್ಲಿ ತಾರತಮ್ಯ ಆಗಬಾರದು. ಎಲ್ಲರನ್ನು ಸಮಾನವಾಗಿ ಕಾಣಬೇಕು. ಅಂದಾಗ ಮಾತ್ರ ಅಭಿವೃದ್ಧಿಗೆ ವೇಗ ಮತ್ತು ಸ್ಪಂದನೆ ಸಿಗುತ್ತದೆ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ಅವರು ಸೋಮವಾರ ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬೆಳಗಾವಿ ವಿಭಾಗ ಮಟ್ಟದ ಎಲ್ಲ ಜಿಲ್ಲೆಗಳ 2026-27ನೇ ಸಾಲಿನ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಮ್ಮ ಅಭಿವೃದ್ಧಿ ನಮ್ಮ ಸಹಭಾಗಿತ್ವದಲ್ಲಿ’ ಎಂಬ ಬಲವಾದ ನಂಬಿಕೆ ಸಾಮಾನ್ಯ ಜನರಲ್ಲಿ ಮೂಡಬೇಕು. ಇದಕ್ಕಾಗಿ ಯೋಜನೆಗಳ ವಿಕೇಂದ್ರೀಕರಣ, ಅಧಿಕಾರದ ವಿಕೇಂದ್ರೀಕರಣ ಆಗಬೇಕು. ಅಂದಾಗ ಪಂಚಾಯತ್ ರಾಜ್ಯ ವ್ಯವಸ್ಥೆಗೆ ಸ್ವರೂಪ ಬರುತ್ತದೆ ಎಂದು ಅವರು ಹೇಳಿದರು.

ಹಳ್ಳಿ ಸ್ವಚ್ಛ ಮಾಡಿದರೆ ಅದು ಸ್ವರ್ಗವಾಗುತ್ತದೆ. ಗ್ರಾಮಗಳಲ್ಲಿ ಶೌಚಾಲಯ ಹೆಚ್ಚಿಸಿ. ಗ್ರಾಮದ ಸ್ವಚ್ಛತೆಗೆ ತಿಂಗಳಿಗೆ ಒಂದು ದಿನ ಶ್ರಮದಾನ ಮಾಡಿ. ಅಧಿಕಾರಿಗಳ ನಡೆ ಜನರಲ್ಲಿ ಧನಾತ್ಮಕ ಪ್ರೇರಣೆ ಬೆಳೆಸಬೇಕು ಎಂದು ಹೇಳಿದರು.

ಸರ್ಕಾರದ ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಿ ಖುಷಿ ಪಡೋಣ. ಜನರ ಭಾವನೆಗಳನ್ನು ಗೌರವಿಸಿ, ಬೇಡಿಕೆಗಳಿಗೆ ಸ್ಪಂದಿಸಿದರೆ ಜನರು ನಿಮ್ಮನ್ನು ದೈವೀ ಸ್ವರೂಪದಲ್ಲಿ ಕಾಣುತ್ತಾರೆ. ನಮಗೆ ಸಿಕ್ಕ ಸ್ಥಾನಮಾನ ಜನರ ಪ್ರಗತಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಅಭಿವೃದ್ಧಿ ಯೋಜನೆ ಯಶಸ್ವಿಯಾಗುತ್ತದೆ. ಜನರ ಬೇಡಿಕೆಗಳನ್ನು ಗ್ರಾಮ ಸಭೆಗಳ ಮೂಲಕ ಸಂಗ್ರಹಿಸಿ, ಯೋಜನೆಗಳನ್ನು ರೂಪಿಸಬೇಕು. ಜಿಲ್ಲಾ ವಾರ್ಷಿಕ ಅಭಿವೃದ್ಧಿ ಯೋಜನೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಪ್ರತೀಕವಾಗಿರಬೇಕು. ಎಲ್ಲ ವರ್ಗದ ಜನರ, ಸಮುದಾಯಗಳ ಬೇಡಿಕೆಗಳನ್ನು ಗ್ರಾಮ ಮಟ್ಟದಲ್ಲಿ ಚರ್ಚಿಸಿ, ಸೆರ್ಪಡೆಗೊಳಿಸಬೇಕು ಎಂದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಶಾಸಕರೊಂದಿಗೆ, ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಕೈಜೋಡಿಸಬೇಕು. ರಾಜ್ಯಕ್ಕೆ ಮಾದರಿಯಾಗಿರುವ ಹೊಲದ ರಸ್ತೆಯು ನವಲಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 300 ಕಿ.ಮೀ. ಆಗಿದೆ. ಅನೇಕ ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು ಈ ಚಕ್ಕಡಿ ರಸ್ತೆ ಬಗ್ಗೆ ಶ್ಲಾಘಿಸಿದ್ದಾರೆ ಎಂದು ಹೇಳಿದರು.

ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವುದು ಮುಖ್ಯವಾಗಿದೆ. ಯೋಜನಾ ಹಂತದಲ್ಲಿ ಪ್ರತಿಯೊಬ್ಬರಿಗೂ ಇಚ್ಛಾಶಕ್ತಿ ಇರಬೇಕು. ಗ್ರಾಮ ಸ್ವರಾಜ್ಯ ಪಾರದರ್ಶಕವಾಗಿ, ನಿಯಮಾನುಸಾರ ಆಗಬೇಕು. ಯೋಜನಾಭಿವೃದ್ಧಿಯು ಕ್ಷೇತ್ರಮಟ್ಟದಲ್ಲಿ ಸ್ಫೂರ್ತಿಯಿಂದ ಜಾರಿ ಆಗಬೇಕು. ಯೋಜನಾ ಅನುಷ್ಠಾನದಲ್ಲಿ ಲಭ್ಯ ತಾಂತ್ರಿಕತೆಯನ್ನು ಬಳಸಿಕೊಂಡು, ಜನರ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿಯ ಕರಡು ರೂಪಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಧಾರವಾಡ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಬೆಳಗಾವಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಉತ್ತರ ಕನ್ನಡ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದೀಲೇಶ್ ಸಶಿ ಮುಂತಾದವರಿದ್ದರು.

ಜಿಲ್ಲಾ ಕರಡು ಅಭಿವೃದ್ಧಿ ಯೋಜನೆ ತಯಾರಿ ಕುರಿತು ಧಾರವಾಡ ಜಿ.ಪಂ ಸಿಇಓ ದೀಪಕ ಮಡಿವಾಳ, ಬೆಳಗಾವಿಯ ಗಂಗಾಧರ ದೀವಟೇರ, ಗದಗಿನ ಕಂಬಾಳಿಮಠ, ಹಾವೇರಿಯ ಹೆಚ್.ವೈ. ಮೀಸಿ, ಉತ್ತರ ಕನ್ನಡದ ಸೋಮಶೇಖರ ಮಿಸ್ತಾ, ಬಾಗಲಕೋಟದ ಸಿಇಓ ಅಲ್ಲಮಪ್ರಭು ಅಲ್ಲಾಪುರ ಅವರು ವಿವರಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಯೋಜನೆಗಳು ಸರಿಯಾಗಿ ಅನುಷ್ಠಾನ ಆಗುವುದರಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಸಾರ್ವಜನಿಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಹೋಗುವುದರಿಂದ, ಸಮನ್ವಯದಿಂದ ಕೆಲಸ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಬರುವ ಮಾರ್ಚ್ 31ರೊಳಗೆ ಬೆಳಗಾವಿ ವಿಭಾಗದ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಸಿಗಬೇಕು. ಇದು ಗ್ರಾಮಗಳ ಮೂಲಸೌಕರ್ಯವಾಗಿದ್ದು, ಆದ್ಯತೆ ನೀಡಬೇಕು. ಯೋಜನೆಗಳು ಅಧಿಕಾರಿಗಳ ಹಂತದಲ್ಲಿ ರೂಪಿತವಾಗಬಾರದು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಯೋಜನೆಗಳು ರಚನೆ ಆಗಬೇಕು. ಜನರ ಬೇಡಿಕೆಗಳಿಗೆ ಸ್ಪಂದಿಸುವ ಯೋಜನೆಗಳು ದೀರ್ಘಕಾಲಿಕ ಬಾಳಿಕೆ ಬರುತ್ತವೆ.

ಡಿ.ಆರ್. ಪಾಟೀಲ, ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!