ಕಾರವಾರ:- ಸೋಮವಾರ ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ್ದ ಕಾರು ಸ್ಪೋಟ ಪ್ರಕರಣ ಬೆನ್ನಲ್ಲೇ ಕಾರವಾರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಲ್ಲಿನ ಎಸ್‌ಪಿ ದೀಪನ್ ಅವರು, ಸೂಕ್ಷ್ಮ ಪ್ರದೇಶಗಳಲ್ಲಿ ಪ್ಯಾಟ್ರೊಲಿಂಗ್‍ಗೆ ಸೂಚನೆ ಕೊಟ್ಟಿದ್ದಾರೆ. ಕಾರವಾರ ಬಂದರು ಸೇರಿದಂತೆ ಜಿಲ್ಲೆಯ ವಿವಿಧ ಬಂದರು, ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್ ಮುಂತಾದ ಸೂಕ್ಷ್ಮ ಪ್ರದೇಶಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರವಾರದ ಕ್ರಿಮ್ಸ್ ಆಸ್ಪತ್ರೆ ಆವರಣ, ಬಂದರು ಪ್ರದೇಶಗಳಲ್ಲಿ ಎಸ್‌ಪಿಯವರು ಖುದ್ದು ಪರಿಶೀಲನೆ ನಡೆಸಿದ್ದಾರೆ.
ರೈಲ್ವೇ ನಿಲ್ದಾಣ, ಬಂದರು, ಬಸ್‍ಸ್ಟ್ಯಾಂಡ್ ಹಾಗೂ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಪರಿಶೀಲನೆಗೆ ಬಾಂಬ್ ಹಾಗೂ ಡಾಗ್ ಸ್ಕ್ವಾಡ್ ತಂಡಕ್ಕೆ ಸೂಚನೆ ನೀಡಲಾಗಿದೆ. ಕರ್ನಾಟಕ ಗಡಿ ಭಾಗದ ಗೋವಾ ಭಾಗದ ಮಾಜಾಳಿ, ರಾಮನಗರ ತಾಲೂಕಿನ ಅನಮೋಡ್ ಭಾಗದಲ್ಲಿ ಜಿಲ್ಲೆಗೆ ಬರುವ ವಾಹನಗಳ ಪರಿಶೀಲನೆ ಸೂಚನೆ ನೀಡಲಾಗಿದೆ.
ಕದಂಬ ನೌಕಾನೆಲೆ ಪ್ರದೇಶ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರ ಪ್ರದೇಶದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.


